ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜಿತಿನ್ ಪ್ರಸಾದ್, ಪಕ್ಷಕ್ಕೆ ಸ್ವಾಗತಿಸಿದ ಪಿಯೂಷ್ ಗೋಯಲ್
ಹೊಸದಿಲ್ಲಿ: ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಕೇಂದ್ರದ ಮಾಜಿ ಸಚಿವ ಜಿತಿನ್ ಪ್ರಸಾದ್ ಅವರು ಇಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಯನ್ನು ಸೇರಿಕೊಂಡರು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಜಿತಿನ್ ಪ್ರಸಾದ್ ಅವರನ್ನು ಪಕ್ಷದ ಮುಖ್ಯ ಕಚೇರಿಯಲ್ಲಿ ಸ್ವಾಗತಿಸಿದರು.
ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಗೆ ಇದು ತೀವ್ರ ಹಿನ್ನಡೆಯಾಗಿದೆ.
ಕಳೆದ ವರ್ಷ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದ ನಂತರ ಇದೀಗ 47 ವರ್ಷದ ಜಿತಿನ್ ಪ್ರಸಾದ್ ಅವರು ಕಾಂಗ್ರೆಸ್ ತೊರೆದಿದ್ದಾರೆ. 2019 ರಲ್ಲಿ ಪ್ರಸಾದ್ ಕಾಂಗ್ರೆಸ್ ತೊರೆಯುತ್ತಾರೆ ಎಂಬ ವದಂತಿ ಹಬ್ಬಿತ್ತು.
ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದಿದ್ದ 23 ಕಾಂಗ್ರೆಸ್ ನಾಯಕರ ಗುಂಪಿನಲ್ಲಿ ಪ್ರಸಾದ್ ಕೂಡ ಇದ್ದರು. ಭಾರತೀಯ ಸೆಕ್ಯುಲರ್ ಫ್ರಂಟ್‌ನೊಂದಿಗೆ ತಮ್ಮದೇ ಪಕ್ಷದ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಅವರು ಟೀಕಿಸಿದರು.
ಉತ್ತರ ಪ್ರದೇಶದ ಧೌರಾಹ್ರಾ ಕ್ಷೇತ್ರದ ಮಾಜಿ ಲೋಕಸಭಾ ಸಂಸದರು ರಾಜಕೀಯವಾಗಿ ಅತ್ಯಂತ ಮಹತ್ವದ ರಾಜ್ಯದ ಕಾಂಗ್ರೆಸ್ಸಿನ ಉನ್ನತ ನಾಯಕರಲ್ಲಿ ಒಬ್ಬರಾಗಿದ್ದರು ಹಾಗೂ ಇನ್ನು ಒಂದು ವರ್ಷದೊಳಗೆ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗಿಂತ ಮೊದಲು ಪ್ರಸಾದ್ ಪಕ್ಷವನ್ನು ತೊರೆದಿರುವುದು ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾಗಿದೆ. ಪ್ರಸಾದ್, ಮನಮೋಹನ್ ಸಿಂಗ್ ಸರಕಾರದಲ್ಲಿ ರಾಜ್ಯ ಸಚಿವರಾಗಿದ್ದರು.