2019-20ರಲ್ಲಿ ಇಲೆಕ್ಟೋರಲ್ ಟ್ರಸ್ಟ್ ದೇಣಿಗೆಯಲ್ಲಿ ಬಿಜೆಪಿಗೆ ಸಿಂಹಪಾಲು: 276 ಕೋಟಿ ರೂ. ಸಂಗ್ರಹ
ಹೊಸದಿಲ್ಲಿ : ಏರ್‍ಟೆಲ್ ಸಮೂಹ ಮತ್ತು ಡಿಎಲ್‍ಎಫ್ ಲಿಮಿಟೆಡ್ ಸಹಿತ ಪ್ರಮುಖ ದೇಣಿಗೆ ನೀಡುವ ಸಂಸ್ಥೆಗಳಿರುವ ಪ್ರೂಡೆಂಟ್ ಇಲೆಕ್ಟೋರಲ್ ಟ್ರಸ್ಟ್ ಮೂಲಕ 2019-20ರಲ್ಲಿ ಸಂಗ್ರಹಿಸಲಾದ ರೂ 271.5 ಕೋಟಿ ದೇಣಿಗೆಯಲ್ಲಿ ಬಿಜೆಪಿ ಶೇ80ರಷ್ಟು ಸಿಂಹಪಾಲು ಪಡೆದಿದೆ ಎಂದು Timesofindia.com ವರದಿ ಮಾಡಿದೆ.
ವಿವಿಧ ಇಲೆಕ್ಟೋರಲ್ ಟ್ರಸ್ಟ್ ಗಳ ಮೂಲಕ ಆರ್ಥಿಕ ವರ್ಷ 2020ರಲ್ಲಿ ಸಂಗ್ರಹಿಸಲಾದ ಒಟ್ಟು ದೇಣಿಗೆಯ ಪೈಕಿ ಬಿಜೆಪಿಗೆ ರೂ 276.45 ಕೋಟಿ ದೊರಕಿದ್ದು ಇದರಲ್ಲಿ ಪ್ರೂಡೆಂಟ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 217.75 ಕೋಟಿ, ಜನಕಲ್ಯಾಣ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 45.95 ಕೋಟಿ ಹಾಗೂ ಬಿ ಬಿ ಜನರಲ್ ಇಲೆಕ್ಟೋರಲ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 9 ಕೋಟಿ ಹಾಗೂ ಸಮಾಜ ಇಲೆಕ್ಟೋರಲ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 3.75 ಕೋಟಿ ದೇಣಿಗೆ ದೊರಕಿದೆ.
ಕಾಂಗ್ರೆಸ್ ಪಕ್ಷಕ್ಕೆ ದೊರೆತ ಪಾಲು ರೂ 58 ಕೋಟಿ ಆಗಿದ್ದರೆ ಇದರಲ್ಲಿ ಪ್ರೂಡೆಂಟ್ ಇಲೆಕ್ಟೋರಲ್ ಟ್ರಸ್ಟ್ ನ ರೂ 31 ಕೋಟಿ, ಜನಕಲ್ಯಾಣ್ ಟ್ರಸ್ಟ್ ನ ರೂ 25 ಕೋಟಿ ಹಾಗೂ ಸಮಾಜ್ ಟ್ರಸ್ಟ್ ನ ರೂ 2 ಕೋಟಿ ಸೇರಿದೆ.
ಆರ್ಥಿಕ ವರ್ಷ 2019-20ಗಾಗಿ ತಮ್ಮ ವಾರ್ಷಿಕ ಆಡಿಟ್ ವರದಿ ಸಲ್ಲಿಸಿದ 35 ಅಧಿಕೃತ ಪಕ್ಷಗಳ ಪೈಕಿ ಟಿಆರ್‍ಎಸ್ ಗರಿಷ್ಠ ಆದಾಯ-ರೂ 130.46 ಕೋಟಿ ಘೋಷಿಸಿದೆ. ಶಿವ ಸೇನೆ ರೂ 111.4 ಕೋಟಿ, ವೈಎಸ್‍ಆರ್ ಕಾಂಗ್ರೆಸ್ ಪಕ್ಷ ರೂ 92.7 ಕೋಟಿ, ಬಿಜೆಪಿ ರೂ 90.35 ಕೋಟಿ, ಎಐಎಡಿಎಂಕೆ ರೂ 89.6 ಕೋಟಿ, ಡಿಎಂಕೆ ರೂ 64.90 ಕೋಟಿ ಹಾಗೂ ಎಎಪಿ ರೂ 49.65 ಕೋಟಿ ಆದಾಯ ಘೋಷಿಸಿವೆ. ಆರ್ಥಿಕ ವರ್ಷ 2019-20ರಲ್ಲಿ ಎಲ್ಲಾ ಮೂಲಗಳಿಂದ ಕಾಂಗ್ರೆಸ್ ಗಳಿಸಿದ ಆದಾಯ ರೂ 682 ಕೋಟಿಯಾಗಿದ್ದು ಹಿಂದಿನ ವರ್ಷಕ್ಕೆ ಹೋಲಿಸಿದಾಗ ಶೇ25ರಷ್ಟು ಕಡಿಮೆಯಾಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಹೊರತುಪಡಿಸಿ ಪ್ರೂಡೆಂಟ್ ಟ್ರಸ್ಟ್ ರೂ 11.26 ಕೋಟಿ ಎಎಪಿ ಗೆ ರೂ 5 ಕೋಟಿ ಶಿವಸೇನೆಗೆ, ತಲಾ ರೂ 2 ಕೋಟಿ ಸಮಾಜವಾದಿ ಪಕ್ಷ ಹಾಗೂ ಜನನಾಯಕ ಪಕ್ಷಕ್ಕೆ ತಲಾ ರೂ 1 ಕೋಟಿ, ಎಲ್‍ಜೆಪಿ ಹಾಗೂ ಶಿರೋಮಣಿ ಅಕಾಳಿ ದಳಕ್ಕೆ ಹಾಗೂ ರೂ 50 ಲಕ್ಷ ಇಂಡಿಯನ್ ನ್ಯಾಷನಲ್ ಲೋಕ್ ದಳಕ್ಕೆ ನೀಡಿದೆ.
ಪ್ರೊಗ್ರೆಸ್ಸಿವ್ ಇಲೆಕ್ಟೋರಲ್ ಟ್ರಸ್ಟ್‍ನ ವರದಿ ಲಭ್ಯವಿಲ್ಲ. ಜನಕಲ್ಯಾಣ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 70.95 ಕೋಟಿಯಲ್ಲಿ ಹೆಚ್ಚಿನ ದೇಣಿಗೆ ಜೆಎಸ್‍ಡಬ್ಲ್ಯು ಸಮೂಹದ್ದಾಗಿದ್ದು ಬಿಜೆಪಿಗೆ ರೂ 45.95 ಕೋಟಿ ಹಾಗೂ ಕಾಂಗ್ರೆಸ್ ಗೆ ರೂ 25 ಕೋಟಿ ದೇಣಿಗೆ ದೊರಕಿದೆ.
ಸಮಾಜ್ ಎಲೆಕ್ಟೋರಲ್ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ರೂ 7.4 ಕೋಟಿಯಲ್ಲಿ ರೂ 3.75 ಕೋಟಿ ಬಿಜೆಪಿಯ ಜಮ್ಮು ಕಾಶ್ಮೀರ ಘಟಕ ಹಾಗೂ ರೂ 2 ಕೋಟಿ ಕಾಂಗ್ರೆಸ್ ಪಕ್ಷಕ್ಕೆ ಹೋಗಿದೆ. ಎ ಬಿ ಜನರಲ್ ಟ್ರಸ್ಟ್ ಗೆ ದೇಣಿಗೆ ನೀಡಿದ ಏಕೈಕ ಸಂಸ್ಥೆ ಹಿಂಡಾಲ್ಕೊ ಆಗಿದ್ದು ಒಟ್ಟು ರೂ 10 ಕೋಟಿ ಪೈಕಿ ರೂ 9 ಕೋಟಿ ಬಿಜೆಪಿಗೆ ಹಾಗೂ ರೂ 1 ಕೋಟಿ ಜಾರ್ಖಂಡ್ ಮುಕ್ತಿ ಮೋರ್ಚಾಗೆ ದೊರಕಿದೆ.