ಆಕ್ಸಿಜನ್ ಪೂರೈಕೆ ಕಡಿತಗೊಳಿಸಿ ಆಕ್ರೋಶಕ್ಕೆ ಕಾರಣವಾಗಿದ್ದ ಆಗ್ರಾ ಆಸ್ಪತ್ರೆಗೆ ಬೀಗ ಜಡಿದ ಜಿಲ್ಲಾಡಳಿತ

ಹೊಸದಿಲ್ಲಿ: ಎಪ್ರಿಲ್ ನಲ್ಲಿ ಅಣಕು ಡ್ರಿಲ್ ನಲ್ಲಿ ಐದು ನಿಮಿಷಗಳ ಕಾಲ ರೋಗಿಗಳಿಗೆ ಆಮ್ಲಜನಕದ ಪೂರೈಕೆಯನ್ನು ಕಡಿತಗೊಳಿಸಿ ಆಕ್ರೋಶಕ್ಕೆ ಕಾರಣವಾಗಿದ್ದ ಆಸ್ಪತ್ರೆಯೊಂದಕ್ಕೆ ಉತ್ತರ ಪ್ರದೇಶದ ಆಗ್ರಾ ನಗರದ ಆಡಳಿತವು ಮಂಗಳವಾರ ಮೊಹರು ಹಾಕಿದೆ.
ಆಸ್ಪತ್ರೆಯ ಮಾಲಕ 5 ನಿಮಿಷ ಆಕ್ಸಿಜನ್ ಪೂರೈಕೆಯನ್ನು ಸ್ಥಗಿತಗೊಳಿಸಿದ ಬಳಿಕ ರೋಗಿಗಳು ಉಸಿರಾಡಲು ಪರದಾಡಿದ್ದರು ಎಂದು ಹೇಳುತ್ತಿರುವ ವೀಡಿಯೊವೊಂದು ವೈರಲ್ ಆದ ಬಳಿಕ ಜಿಲ್ಲಾಡಳಿತ ಎಚ್ಚರಗೊಂಡಿದೆ ಎಂದು 'ಇಂಡಿಯನ್ ಎಕ್ಸ್ ಪ್ರೆಸ್' ವರದಿ ಮಾಡಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ ಉತ್ತರಪ್ರದೇಶ ಹಾಗೂ ಇತರ ಹಲವಾರು ರಾಜ್ಯಗಳು ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸುತ್ತಿರುವಾಗ ಈ ಘಟನೆ ಸಂಭವಿಸಿತ್ತು.
ಪ್ಯಾರಾಸ್ ಆಸ್ಪತ್ರೆಯ ಮಾಲೀಕರಾದ ಅರಿಂಜಯ್ ಜೈನ್ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ANI ತಿಳಿಸಿದೆ.
ಆಸ್ಪತ್ರೆಯ ಆಮ್ಲಜನಕ ಪೂರೈಕೆ ಮುಗಿದ ಹೋದರೆ ಯಾರು ಬದುಕುಳಿಯುತ್ತಾರೆ ಎಂಬುದನ್ನು ಪರೀಕ್ಷಿಸಲು ಎಪ್ರಿಲ್ 26 ರಂದು ಅಣಕು ಡ್ರಿಲ್ ಮಾಡಲಾಗಿದೆ. ಒಂದು ಹಂತದಲ್ಲಿ, 22 ರೋಗಿಗಳು ತಮ್ಮ ಆಮ್ಲಜನಕದ ಪೂರೈಕೆಯಲ್ಲಿ ಅಡಚಣೆಯಾದಾಗ ನೀಲಿ ಬಣ್ಣಕ್ಕೆ ತಿರುಗಿದರು ಹಾಗೂ ಉಸಿರಾಟಕ್ಕಾಗಿ ಪರದಾಡಿದರು ಎಂದು ಜೈನ್ ಹೇಳುತ್ತಿರುವ ವೀಡಿಯೊ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ವೀಡಿಯೊವನ್ನು ಚಿತ್ರೀಕರಿಸಿದ ದಿನ ಎಪ್ರಿಲ್ 28 ರಂದು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಯಾವುದೇ ರೋಗಿಯು ಸಾವನ್ನಪ್ಪಿಲ್ಲ. ಎಪ್ರಿಲ್ 28 ರಂದು ಆಸ್ಪತ್ರೆಯಲ್ಲಿ ಆಮ್ಲಜನಕ ಲಭ್ಯವಿತ್ತು ಎಂದು ಆಗ್ರಾ ಜಿಲ್ಲಾಧಿಕಾರಿ ಪ್ರಭು ನರೈನ್ ಸಿಂಗ್ ಹೇಳಿದ್ದಾರೆ.







