ರಾಜ್ಯದಲ್ಲಿ ಹಂತ ಹಂತವಾಗಿ ಲಾಕ್‍ಡೌನ್ ಸಡಿಲಿಕೆ: ಸಚಿವ ಆರ್.ಅಶೋಕ್

ಬೆಂಗಳೂರು, ಜೂ. 9: ಕೋವಿಡ್ ಸೋಂಕಿನ ಎರಡನೆ ಅಲೆ ತಡೆಗೆ ಹೇರಿರುವ ಲಾಕ್‍ಡೌನ್ ಅನ್ನು ಹಂತ-ಹಂತವಾಗಿ ಸಡಿಲಿಸಲು ಉದ್ದೇಶಿಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಅವಕಾಶ ಕಲ್ಪಿಸುವ ಚಿಂತನೆಯಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ನಿಮ್ಹಾನ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಕಠಿಣ ನಿರ್ಬಂಧವನ್ನು ಹಂತ-ಹಂತವಾಗಿ ಅನ್‍ಲಾಕ್ ಮಾಡುವ ಉದ್ದೇಶವಿದೆ. ನಗರದ ಉದ್ಯಾನವನಗಳಲ್ಲಿ ಬೆಳಗ್ಗೆ ಮತ್ತು ಸಂಚೆ ವಾಯು ವಿಹಾರ ಮಾಡಲು ಅವಕಾಶ ನೀಡಲು ಸರಕಾರದ ಹಂತದಲ್ಲಿ ಯೋಚಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಅನ್‍ಲಾಕ್ ಮಾಡುವ ಬಗೆ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚೆ ಮಾಡಿದ್ದು, ಶೀಘ್ರದಲ್ಲೆ ಈ ಬಗ್ಗೆ ಸರಕಾರ ತೀರ್ಮಾನ ಮಾಡಲಿದೆ ಎಂದ ಅವರು, ಕೋವಿಡ್ ಮೂರನೆ ಅಲೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡುವ ವೇಳೆ ಪೋಷಕರು ಸ್ಥಳದಲ್ಲೇ ಇರುವ ವ್ಯವಸ್ಥೆ ಮಾಡಲು ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.
ಮಕ್ಕಳಿಗೆ ಚಿಕಿತ್ಸೆ ನೀಡಬೇಕೆಂದರೆ ಪೋಷಕರು ಇರಲೇಬೇಕು. ಹಾಗಾಗಿ ಪೋಷಕರು ಮಕ್ಕಳ ಜೊತೆಗೆ ಇರುವ ಕ್ಯಾಬಿನ್ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಸಂಬಂದಿಸಿದಂತೆ ವೈದ್ಯರಿಗೆ ತರಬೇತಿ ನಡೆಸಲಾಗಿದೆ. ಮಕ್ಕಳಿಗೆ ಕೋವಿಡ್ ಬಂದರೆ ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ 25 ಲಕ್ಷ ಮಕ್ಕಳಿದ್ದು, 10 ಮಂದಿ ಮಕ್ಕಳ ತಜ್ಞರನ್ನು ಗುರುತಿಸಿ, ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಬಗ್ಗೆ ಸಲಹೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.







