ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಮಲತಾಯಿ ಧೋರಣೆ: ಶಾಹುಲ್ ಹಮೀದ್ ಆರೋಪ

ಮಂಗಳೂರು, ಜೂ. 9: ಸರಕಾರದಿಂದ ವಿದ್ಯಾರ್ಥಿ ವೇತನದ ಭರವಸೆಯೊಂದಿಗೆ ಉಜ್ವಲ ಭವಿಷ್ಯದ ಕನಸಿನೊಂದಿಗೆ ಉನ್ನತ ಶಿಕ್ಷಣಕ್ಕೆ ಮುಂದಾಗಿದ್ದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಸ್ತುತ ಮಾನಸಿಕ ಚಿತ್ರಹಿಂಸೆ ಯನ್ನು ಅನುಭವಿಸುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಆರೋಪಿಸಿದ್ದಾರೆ.
ನಂತರ ಮಾತನಾಡಿದ ಅವರು, ಅರಿವು ಯೋಜನೆಯಡಿ 2019-20ನೆ ಸಾಲಿನಲ್ಲಿ ಅರ್ಜಿ ಸಲ್ಲಿಸಿದ್ದ ಕ್ರೈಸ್ತ, ಜೈನ, ಸಿಖ್, ಮುಸ್ಲಿಂ ಮೊದಲಾದ ಅಲ್ಪಸಂಖ್ಯಾತ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಕಳೆದ ವರ್ಷ ಅನುದಾನದಲ್ಲಿ ಕಡಿತ ಮಾಡಿದ್ದರೆ ಈ ವರ್ಷ ಅನುದಾನವೇ ಬಿಡುಗಡೆಯಾಗಿಲ್ಲ ಎಂದು ಆಕ್ಷೇಪಿಸಿದರು.
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಮಂಜೂರು ಮಾಡಿದ್ದ 125 ಕೋಟಿ ರೂ.ಗಳನ್ನು ಮೊದಲ ಪರಿಷ್ಕರಣೆಯ ಬಳಿಕ 105 ಕೋಟಿ ರೂ.ಗಳಿಗೆ ಇಳಿಕೆ ಮಾಡಿ, ಮತ್ತೆ ಪರಿಷ್ಕರಿಸಿ ಅದನ್ನು 71 ಕೋಟಿ ರೂ.ಗಳಿಗೆ ಮೀಸಲಿಟ್ಟರೂ ಈವರೆಗೂ ಚಿಕ್ಕಾಸು ಬಿಡುಗಡೆಯಾಗಿಲ್ಲ ಎಂದು ಅವರು ಆರೋಪಿಸಿದರು.
ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ನೀಟ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸರಕಾರ ನಿಗದಿಪಡಿಸಿದ ಶುಲ್ಕದ ವಾರ್ಷಿಕ 7.5 ಲಕ್ಷ ರೂ.ಗಳಲ್ಲಿ ಈ ಹಿಂದಿನ ಸರಕಾರ 3.5 ಲಕ್ಷ ರೂ. ಅನುದಾನ ನೀಡುವ ಅರಿವು ಯೋಜನೆ ಆರಂಭ ಗೊಂಡಿತ್ತು. ಪ್ರಸಕ್ತ ಸರಕಾರ ಕಳೆದ ವರ್ಷ ಅದನ್ನು 2 ಲಕ್ಷ ರೂ.ಗಳಿಗೆ ಇಳಿಕೆ ಮಾಡಿತ್ತು. ಈವರ್ಷ ನವೀಕರಣವಾಗಲಿ, ಹೊಸ ಅರ್ಜಿಯನ್ನು ಪುರಸ್ಕರಿಸುವ ಕಾರ್ಯವಾಗಲಿ ಆಗಿಲ್ಲ. ಈ ನಡುವೆ ಬಿಡಿಎಸ್ (ದಂತ ವೈದ್ಯಕೀಯ) ಗೆ ನಿಗದಿಯಾದ 3.5 ಲಕ್ಷ ರೂ.ಗಳಲ್ಲಿ ಕೇವಲ 30,000 ರೂ., ಬಿಇಗೆ ನಿಗದಿಯಾದ 55,000 ರೂ.ಗಳಲ್ಲಿ ಕೇವಲ 30,000 ರೂ., ಪದವಿ ಶಿಕ್ಷಣಕ್ಕೆ ನಿಗದಿಯಾಗಿದ್ದ 20,000 ರೂ.ಗಳಲ್ಲಿ ಕೇವಲ 10,000ರೂ.ಗಳ ಸಹಾಯಧನವನ್ನು ಮಾತ್ರವೇ ನೀಡಲಾಗಿದೆ. ಈ ವರ್ಷ ಖಾಸಗಿ ಮೆಡಿಕಲ್ ಕಾಲೇಜುಗಳ ಪ್ರವೇಶಾತಿ ಮುಗಿದು ಆನ್‌ಲೈನ್ ತರಗತಿ ಆರಂಭವಾಗಿದೆ. ಆದರೆ ಸರಕಾರ ಅರ್ಜಿಯನ್ನೇ ಆಹ್ವಾನಿಸಿಲ್ಲ. ಮಾತ್ರವಲ್ಲದೆ ಈ ಬಾರಿ ಖಾಸಗಿ ಕಾಲೇಜುಗಳಲ್ಲಿ ಸರಕಾರದ ಸೀಟು ದರವನ್ನು 10 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಕಳೆದ ವರ್ಷ ದ.ಕ. ಜಿಲ್ಲೆಯಲ್ಲೇ ಅರಿವು ಸಾಲದಡಿ 535 ಅರ್ಜಿಗಳು ಇನ್ನೂ ಇತ್ಯರ್ಥವಾಗಿಲ್ಲ.ಇದಲ್ಲದೆ ವಿದ್ಯಾಸಿರಿ ಯೋಜನೆ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನೀಡುವ ಗೌರವಧನ, ವಿದೇಶ ವ್ಯಾಸಂಗಕ್ಕಾಗಿ ಸಿಗುವ ಸಹಾಯಧನ ಎಲ್ಲವನ್ನೂ ನಿಲ್ಲಿಸಲಾಗಿದೆ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಟೂರಿಸ್ಟ್ ಟ್ಯಾಕ್ಸಿ ಯೋಜನೆಯಡಿ 3 ಲಕ್ಷ ರೂ.ಗಳ ಸಬ್ಸಿಡಿ ಯನ್ನು 75000 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಶ್ರಮಶಕ್ತಿ ಯೋಜನೆಯಡಿ ವಿಧಾನಸಭಾ ಕ್ಷೇತ್ರವೊಂದಕ್ಕೆ ಸ್ವ ಉದ್ಯೋಗಕ್ಕಾಗಿ ಶೇ. 50ರಷ್ಟು ಸಬ್ಸಿಡಿ ನೀಡುವ ಯೋಜನೆಯಡಿ ಹಿಂದೆ 100 ಮಂದಿಗೆ ಅವಕಾಶವಿದ್ದು, ಅದನ್ನು ಪ್ರಸ್ತುತ ಕೇವಲ 9 ಮಂದಿಗೆ ಇಳಿಕೆ ಮಾಡಲಾಗಿದೆ. ಒಟ್ಟಿನಲ್ಲಿ ಸರಕಾರ ಕೊರೋನದಿಂದ ತತ್ತರಿಸಿರುವ ಜನರಿಗೆ ಈ ಮೂಲಕ ಸಹಾಯ ಧನ, ಗೌರವಧನ, ವಿದ್ಯಾರ್ಥಿ ವೇತನದಲ್ಲೂ ಕಡಿತ ಮಾಡಿ ನಡು ನೀರಿನಲ್ಲಿ ಕೈಬಿಟ್ಟಂತಾಗಿದೆ ಎಂದು ಶಾಹುಲ್ ಹಮೀದ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸಕ್ತ ಸರಕಾರ ಬ್ರಾಹ್ಮಣ ಅಭಿವೃದ್ದಿ ನಿಗಮಕ್ಕೆ ಆದಾಯ ಮಿತಿಯನ್ನು 2 ಲಕ್ಷದಿಂದ 8.5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ್ದರೆ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ- ಪಂಗಡ ಹಾಗೂ ಹಿಂದುಳಿದ ವರ್ಗಗಳ ಅದಾಯ ಮಿತಿ ಮಾತ್ರ 2 ಲಕ್ಷ ರೂ.ಗಳಿಗೆ ಸೀಮಿತ ಗೊಳಿಸಿದೆ. ಇದು ಸರಕಾರದ ಮಲತಾಯಿ ಧೋರಣೆ ಎಂದು ಅವರು ಆರೋಪಿಸಿದರು.
ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ನವೀನ್ ಡಿಸೋಜಾ, ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ಶಬೀರ್, ಹೊನ್ನಯ್ಯ, ಇಮ್ರಾನ್, ಶಶಿಧರ ಹೆಗ್ಡೆ, ಯೂಸುಫ್ ಮೊದಲಾದವರು ಉಪಸ್ಥಿತರಿದ್ದರು.







