ಲಾಕ್ಡೌನ್ ಮುಂದುವರೆಸಿದರೆ ಇನ್ನಷ್ಟು ಆರ್ಥಿಕ ಸಂಕಷ್ಟ: ಶಾಸಕ ರಘುಪತಿ ಭಟ್

ರಘುಪತಿ ಭಟ್
ಉಡುಪಿ, ಜೂ.9: ಕೊರೋನ ಸೋಂಕಿನ ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ಮುಂದೆ ಸಂಪೂರ್ಣ ಲಾಕ್ಡೌನ್ ಮಾಡುವ ಅಗತ್ಯ ಇಲ್ಲ. ಮತ್ತೂ ಲಾಕ್ ಡೌನ್ ಮುಂದುವರೆಸಿದರೆ ಜನರು ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವು ನಿಬಂಧನೆಗಳೊಂದಿಗೆ ಜನ ಜೀವನ ಪ್ರಾರಂಭಿಸಬೇಕಾದ ಅನಿವಾರ್ಯತೆ ಇದೆ. ಧಾರ್ಮಿಕ, ಸಾಮಾಜಿಕ, ರಾಜಕೀಯ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಬಾರದು. ಕನಿಷ್ಠ ಮೂರು ತಿಂಗಳು ಈ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದರು.
ಸುಗಮ ಜನ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಮತ್ತು ಗೂಡಂಗಡಿ, ಹೋಟೆಲ್, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅವಕಾಶ ಕೊಡಬೇಕು. ಜೂ.14 ನಂತರವೂ ಲಾಕ್ಡೌನ್ ಮುಂದುವರೆದರೆ ಆರ್ಥಿಕ ಸಂಕಷ್ಟ ಉಂಟಾಗಲಿದೆ. ಲಾಕ್ಡೌನ್ ವಾಪಸ್ ಪಡೆಯುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಪಾಸಿಟಿವಿಟಿ ರೇಟ್ ಶೇ.10-15 ಕಡಿಮೆಯಾದ ಜಿಲ್ಲೆಗೆ ಲಾಕ್ಡೌನ್ ಅಗತ್ಯ ಇರುವುದಿಲ್ಲ. ರಾಜ್ಯದಲ್ಲಿ ಪಾಸಿಟಿವ್ ಕೇಸ್ 50 ಸಾವಿರದಿಂದ 12 ಸಾವಿರಕ್ಕೆ ಇಳಿಕೆಯಾಗಿದೆ. ಅನ್ಲಾಕ್ ಮಾಡದಿದ್ದರೆ ಕೋವಿಡ್ಗಿಂತ ಗಂಭೀರ ಪರಿಸ್ಥಿತಿ ಉಂಟಾಗುತ್ತದೆ ಎಂದು ರಘುಪತಿ ಭಟ್ ಅಭಿಪ್ರಾಯಪಟ್ಟರು.







