ಮಣಿಪಾಲ ಆರೋಗ್ಯ ಕಾರ್ಡ್-2021ರ ನೋಂದಾವಣಿಗೆ ಚಾಲನೆ

ಮಣಿಪಾಲ, ಜೂ.9: ಮಣಿಪಾಲ ಆರೋಗ್ಯ ಕಾರ್ಡ್‌ನ 2021ನೇ ಸಾಲಿನ ನೊಂದಾವಣಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ವರ್ಚುವಲ್ ವೇದಿಕೆ ಮೂಲಕ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಬಲ್ಲಾಳ್, ಕಳೆದ ಎರಡು ದಶಕ ಗಳಿಂದ ನಾವು ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುತಿದ್ದೇವೆ. ಈ ಅವಧಿಯಲ್ಲಿ ನಾವು ಸಾಮಾಜಿಕ ಕಾಳಜಿ ಯೊಂದಿಗೆ ಉತ್ಕ್ರಷ್ಟ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡುವ ಮೂಲಕ ಯೋಜನೆಗೆ ಹೆಚ್ಚು ಹೆಚ್ಚು ಸದಸ್ಯರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಅವಿಭಜಿತ ದಕ್ಸಿಣ ಕನ್ನಡ ಜಿಲ್ಲೆಯ ಜನರಿಗೆಂದು ಪ್ರಾರಂಭಿಸಿದ ಈ ಯೋಜನೆ ಇಂದು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಿಸಿದೆ. ಅಲ್ಲದೇ ಕೇರಳ, ಗೋವಾದಂತಹ ನೆರೆ ರಾಜ್ಯಗಳಿಗೂ ವಿಸ್ತರಣೆ ಆಗಿದೆ. ಸದಸ್ಯತ್ವ ಶುಲ್ಕವಾಗಿ ಒಂದು ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯತ್ವವನ್ನು ಪಡೆಯಬಹುದು ಮತ್ತು ಕಾರ್ಡನ್ನು ಎರಡು ಅಥವಾ ಮೂರನೇ ಬಳಕೆಗಳಲ್ಲಿ ರಿಯಾಯಿತಿ ರೂಪದಲ್ಲಿ ಹೂಡಿಕೆಯನ್ನು ಮರಳಿ ಪಡೆಯಬಹುದು ಎಂದು ಅವರು ಹೇಳಿದರು.
ಮಾಹೆ ವಿವಿಯ ಕುಲಪತಿ ಲೆ.ಜ.(ಡಾ) ಎಂ.ಡಿ.ವೆಂಕಟೇಶ್ ಯೋಜನೆ ವಿವರವನ್ನು ಪ್ರಕಟಿಸುತ್ತಾ, ಮಣಿಪಾಲ್ ಆರೋಗ್ಯ ಕಾರ್ಡ್ ಒಂದು ವರ್ಷದ ಯೋಜನೆಯೊಂದಿಗೆ ಎರಡು ವರ್ಷದ ಯೋಜನೆಯನ್ನು ಸಹ ಒಳಗೊಂಡಿದೆ. ಕಾರ್ಡ್ ಹೊಂದಿರುವವರು ಮಣಿಪಾಲ, ಕಾರ್ಕಳ , ಮಂಗಳೂರು, ಗೋವಾ ಮತ್ತು ಕಟೀಲ್‌ನಲ್ಲಿರುವ ನಮ್ಮ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ರಿಯಾಯಿತಿ ಪ್ರಯೋಜನಗಳನ್ನು ಪಡೆಯಬಹುದು ಎಂದರು.
ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಎಲ್ಲಾ ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಹೊರರೋಗಿ ಸಮಾಲೋಚನೆ ಮೇಲೆ ಶೇ.50 ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇ.30 ರಿಯಾಯಿತಿ, ವಿಕಿರಣಶಾಸ್ತ್ರ ಪರೀಕ್ಷೆಗಳ ಮೇಲೆ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇ.20ರಷ್ಟು ರಿಯಾಯಿತಿ ಪಡೆಯ ಬಹುದು ಎಂದು ಅವರು ಹೇಳಿದರು.
ಮಂಗಳೂರಿನ ಸಹ ಕುಲಪತಿ ಡಾ.ದಿಲೀಪ್ ಜಿ ನಾಯ್ಕ್, ಮಂಗಳೂರು ಕೆಎಂಸಿ ಡೀನ್ ಡಾ.ಎಂ.ವಿ.ಪ್ರಭು, ಮಣಿಪಾಲ ಕೆಎಂಸಿ ಆಸ್ಪತ್ರೆ ನಿರ್ವಹಣಾ ಧಿಕಾರಿ ಸಿ.ಜಿ.ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ, ಮಂಗಳೂರಿನ ವೈದ್ಯಕೀಯ ಅಧೀಕ್ಷಕ ಡಾ. ಆನಂದ್ ವೇಣುಗೋಪಾಲ್, ಮಾರುಕಟ್ಟೆ ಮುಖ್ಯಸ್ಥ ಸಚಿನ್ ಕಾರಂತ್ ಉಪಸ್ಥಿತರಿದ್ದರು.







