ಪ್ರಮುಖ ಸಭೆಯಿಂದ ದೂರ ಉಳಿದ ಮುಕುಲ್ ರಾಯ್,ಬಿಜೆಪಿಯಲ್ಲಿ ಹೆಚ್ಚಿದ ಆತಂಕ

ಕೋಲ್ಕತಾ: ಬಿಜೆಪಿ ಮುಖಂಡ ಮುಕುಲ್ ರಾಯ್ ಅವರು ಕೋಲ್ಕತ್ತಾದಲ್ಲಿ ನಡೆದ ಪ್ರಮುಖ ಸಭೆಯಿಂದ ದೂರ ಉಳಿಯುವ ಮೂಲಕ ತಮ್ಮ ಪಕ್ಷದ ಆತಂಕವನ್ನು ಹೆಚ್ಚಿಸಿದ್ದಾರೆ. ಮುಕುಲ್ ರಾಯ್ ಮೌನಕ್ಕೆ ಮೊರೆ ಹೋಗಿರುವುದು ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ಹಿಂತಿರುಗಲಿದ್ದಾರೆ ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸೀಟುಗಳನ್ನು ಗೆಲ್ಲದ ಇರುವುದರಿಂದ ಹಲವಾರು ನಾಯಕರು ಕಠಿಣ ಪ್ರಶ್ನೆಗಳನ್ನು ಎತ್ತಿದ್ದಾರೆ ಹಾಗೂ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಜೆಪಿ ಪಕ್ಷವು ತನ್ನ ಬಂಗಾಳ ಘಟಕವನ್ನು ರಕ್ಷಿಸಲು ದಿಲ್ಲಿಯಲ್ಲಿ ಪ್ರಯತ್ನಗಳನ್ನು ಆರಂಭಿಸಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು ಮಂಗಳವಾರ ಕರೆದಿದ್ದ ಪ್ರಮುಖ ಸಭೆಯಿಂದ ಬಿಜೆಪಿ ಉಪಾಧ್ಯಕ್ಷರಾಗಿರುವ ಮುಕುಲ್ ರಾಯ್ ಅವರಲ್ಲದೆ, ಇನ್ನೋರ್ವ ಪ್ರಮುಖ ನಾಯಕ ಸುವೇಂದು ಅಧಿಕಾರಿಯೂ ಹೊರಗುಳಿದಿದ್ದಾರೆ. ಅಧಿಕಾರಿಯು ಪ್ರಮುಖ ನಾಯಕರೊಂದಿಗಿನ ಸಭೆಗಳಿಗಾಗಿ ದಿಲ್ಲಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಯ್ ಅವರ ಪತ್ನಿ ಆಸ್ಪತ್ರೆಯಲ್ಲಿದ್ದಾರೆ, ಆದ್ದರಿಂದ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂದು ಮೂಲಗಳು ಬೆಟ್ಟು ಮಾಡಿವೆ. ಆದರೆ ಎಲ್ಲ ಸಂಕೇತಗಳು ರಾಯ್ ಅವರ "ಘರ್-ವಾಪ್ಸಿ" ಅಥವಾ ತೃಣಮೂಲ ಕಾಂಗ್ರೆಸ್ ಗೆ ಮರಳುವುದನ್ನು ಸೂಚಿಸುತ್ತಿವೆ, ಆದರೆ ಅದು ರಾಯ್ ಅವರ ಪತ್ನಿಯ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.
ರಾಯ್ ಬಿಜೆಪಿ ಬಿಡುವ ಕುರಿತ ವದಂತಿಗಳನ್ನು ದೃಢೀಕರಿಸಿಲ್ಲ ಅಥವಾ ನಿರಾಕರಿಸಿಲ್ಲ. ಆದರೆ ಅವರ ಪುತ್ರ ಶುಬ್ರಾನ್ ಶು ತನ್ನ ತಂದೆ ತೃಣಮೂಲ ಕಾಂಗ್ರೆಸ್ ಗೆ ಮರಳುವುದನ್ನು ತಳ್ಳಿಹಾಕಿಲ್ಲ.
ಕಳೆದ ವಾರ, ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ ರಾಯ್ ಅವರ ಪತ್ನಿಯ ಆರೋಗ್ಯವನ್ನು ವಿಚಾರಿಸಿದ್ದರು. ಮರುದಿನ ಬೆಳಿಗ್ಗೆ, ಪ್ರಧಾನಿ ನರೇಂದ್ರ ಮೋದಿಯವರು ರಾಯ್ ಅವರ ಪತ್ನಿಯ ಆರೋಗ್ಯದ ಬಗ್ಗೆ ವಿಚಾರಿಸಲು ಕರೆ ಮಾಡಿದ್ದರು ಎಂದು ವರದಿಯಾಗಿತ್ತು.
35 ಬಿಜೆಪಿ ಶಾಸಕರು ಮರಳಲು ಉತ್ಸುಕರಾಗಿದ್ದಾರೆ ಹಾಗೂ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತೃಣಮೂಲ ಹೇಳಿಕೊಂಡಿದೆ.
ಖಾಸಗಿ ವಿಮಾನದಲ್ಲಿ ದಿಲ್ಲಿಗೆ ತೆರಳಿದ ನಂತರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದ ತೃಣಮೂಲದ ಮಾಜಿ ನಾಯಕ ಹಾಗೂ ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ ಕೂಡ ಬಿಜೆಪಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.