ಪಿಎಂ ಆವಾಸ್ ಯೋಜನೆಯಡಿ 3.61 ಲಕ್ಷ ಮನೆಗಳ ನಿರ್ಮಾಣಕ್ಕೆ ಕೇಂದ್ರದ ಒಪ್ಪಿಗೆ

ಹೊಸದಿಲ್ಲಿ,ಜೂ.9: ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು)ದಡಿ 3.61 ಲಕ್ಷ ಮನೆಗಳ ನಿರ್ಮಾಣಕ್ಕಾಗಿ 708 ಪ್ರಸ್ತಾವಗಳಿಗೆ ಕೇಂದ್ರವು ಒಪ್ಪಿಗೆಯನ್ನು ನೀಡಿದೆ.
ಮಂಗಳವಾರ ನಡೆದ ಯೋಜನೆಯಡಿ ಕೇಂದ್ರ ಮಂಜೂರಾತಿ ಮತ್ತು ನಿಗಾ ಸಮಿತಿಯ 54ನೇ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಭೆಯಲ್ಲಿ ಭಾಗವಹಿಸಿದ್ದವು ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಇದೇ ವೇಳೆ ಸಚಿವಾಲಯದ ಕಾರ್ಯದರ್ಶಿ ಶಂಕರ ಮಿಶ್ರಾ ಅವರು ‘ಪಿಎಂಎವೈ-ಯು ಪ್ರಶಸ್ತಿಗಳು 2021-ನೂರು ದಿನಗಳ ಸವಾಲು ’ಆಂದೋಲನಕ್ಕೆ ಚಾಲನೆ ನೀಡಿದರು.
ಅಭಿಯಾನದ ಯಶಸ್ವಿ ಅನುಷ್ಠಾನ ಮತ್ತು ಆರೋಗ್ಯಕರ ಸ್ಪರ್ಧೆಯ ಸೃಷ್ಟಿಗಾಗಿ ರಾಜ್ಯಗಳು,ಕೇಂದ್ರಾಡಳಿತ ಪ್ರದೇಶಗಳು,ನಗರ ಸ್ಥಳೀಯ ಸಂಸ್ಥೆಗಳು ಮತ್ತು ಫಲಾನುಭವಿಗಳ ಅಸಾಧಾರಣ ಕೊಡುಗೆ ಮತ್ತು ಸಾಧನೆಗಳಿಗಾಗಿ ಈ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಸಚಿವಾಲಯವು ತಿಳಿಸಿದೆ.
ಇದರೊಂದಿಗೆ ಈ ವರೆಗೆ ಪಿಎಂಎವೈ-ಯು ಅಡಿ ಮಂಜೂರಾದ ಮನೆಗಳ ಒಟ್ಟು ಸಂಖ್ಯೆ 112.4 ಲಕ್ಷಕ್ಕೇರಿದೆ. 82.5 ಲ.ಮನೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು,ಈ ಪೈಕಿ 48.31 ಲ.ಮನೆಗಳನ್ನು ಪೂರ್ಣಗೊಳಿಸಲಾಗಿದೆ/ಹಸ್ತಾಂತರಿಸಲಾಗಿದೆ. ಈ ಅಭಿಯಾನದಡಿ ಒಟ್ಟು ಹೂಡಿಕೆಯು 7.35 ಲ.ಕೋ.ರೂ. ಗಳಾಗಿದ್ದು,1.81 ಲ.ಕೋ.ರೂಗಳ ಕೇಂದ್ರದ ಆರ್ಥಿಕ ನೆರವಿನ ಪೈಕಿ 96,067 ಕೋ.ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.





