ದ.ಕ.: ಮುಂಗಾರು ಮಳೆ ಚುರುಕು ಸಾಧ್ಯತೆ
ಮಂಗಳೂರು,ಜೂ.9: ಕರ್ನಾಟಕ ಕರಾವಳಿಯಲ್ಲಿ ಒಂದೆರಡು ದಿನಗಳಲ್ಲಿ ಭಾರಿ ಮಳೆಯಾಗುವ ಸೂಚನೆ ಇದ್ದು, ಆ ಮೂಲಕ ಕಳೆದ ಮೂರ್ನಾಲ್ಕು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಚುರುಕು ಪಡೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ಮಾಹಿತಿಯಂತೆ ಗುರುವಾರ ಮತ್ತು ಶುಕ್ರವಾರ ಯೆಲ್ಲೋ ಅಲರ್ಟ್ ಹಾಗೂ ಶನಿವಾರ ಆರೆಂಜ್, ರವಿವಾರ ಮತ್ತೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬುಧವಾರ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಉಳಿದಂತೆ ಮೋಡ ಮತ್ತು ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಮಂಗಳೂರು ನಗರ-ಹೊರವಲಯದಲ್ಲಿ ಹಗಲು ವೇಳೆ ತುಂತುರು ಮತ್ತು ಮುಸ್ಸಂಜೆಯ ವೇಳೆಗೆ ಮಳೆಯಾಗಿತ್ತು.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡವು ಜೂ.12ರವೇಳೆಗೆ ಸಣ್ಣ ಪ್ರಮಾಣದ ವಾಯುಭಾರ ಕುಸಿತವಾಗಿ ಬದಲಾಗಲಿದೆ. ಇದರ ಪರಿಣಾಮ ಕರಾವಳಿಯ ಮಳೆಯ ಮೇಲೆ ಪರಿಣಾಮ ಉಂಟಾಗದಿದ್ದರೂ ಮುಂಗಾರು ಮತ್ತಷ್ಟು ಬಲಗೊಳ್ಳಲು ಸಹಾಯ ಮಾಡಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರದ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.





