ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ, ದಾಖಲಾತಿ ಮಾರ್ಗಸೂಚಿ ಬಿಡುಗಡೆ ನಂತರವೇ ಪ್ರಥಮ ಪಿಯು ದಾಖಲಾತಿ
ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ. 9: 2020-21ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಬಂದ ನಂತರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯು ದಾಖಲಾತಿ ಮಾರ್ಗಸೂಚಿ ಬಿಡುಗಡೆ ಮಾಡಿದ ನಂತರವೇ 2021-22ನೇ ಸಾಲಿನ ಪ್ರಥಮ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡದ ಹೊರತು ಪ್ರಥಮ ಪಿಯುಸಿಗೆ ದಾಖಲಾತಿ ನೀಡುವಂತಿಲ್ಲ ಹಾಗೂ ಆನ್ಲೈನ್ ತರಗತಿಗಳನ್ನು ಸಹ ನಡೆಸುವಂತಿಲ್ಲವೆಂದು ತಿಳಿಸಲಾಗಿದೆ.
ಶಿಕ್ಷಣ ಇಲಾಖೆ ಮಾರ್ಗಸೂಚಿಯನ್ನು ಮೀರಿ ಯಾವುದೇ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿಗಳು ನಡೆಸಿದ ಬಗ್ಗೆ ಹಾಗೂ ಆನ್ಲೈನ್ ತರಗತಿಗಳು ನಡೆಯುತ್ತಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಲ್ಲಿ ಸಂಬಂಧಿಸಿದ ಕಾಲೇಜುಗಳ ಮೇಲೆ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗೂ ಆ ಕಾಲೇಜುಗಳ ಮಾನ್ಯತೆ ರದ್ದು ಪಡಿಸಲು ಕ್ರಮ ವಹಿಸಲಾಗುವುದು ಎಂದು ಸೂಚಿಸಲಾಗಿದೆ.
Next Story





