ಹುಲಿವೇಷ ಎಂದು ಹೇಳಿದವರು ಆತ್ಮವಲೋಕನ ಮಾಡಿಕೊಳ್ಳಲಿ: ಎಂ.ಪಿ.ರೇಣುಕಾಚಾರ್ಯ ತಿರುಗೇಟು

ಬೆಂಗಳೂರು, ಜೂ. 9: `ನಾನು ಯಾವುದೇ ವೇಷಧಾರಿಯಲ್ಲ. ನನಗೆ ಹಿರಿಯರ ಬಗ್ಗೆ ಗೌರವವಿದೆ, ನನಗೆ ಬಣ್ಣ ಹಚ್ಚೋದು, ವೇಷ ಹಾಕೋದು ಗೊತ್ತಿಲ್ಲಾ. ನನ್ನ ಬಗ್ಗೆ ಹುಲಿವೇಷ ಎಂದು ಹೇಳಿದವರು ಆತ್ಮವಲೋಕನ ಮಾಡಿಕೊಳ್ಳಲಿ. ಬಿಎಸ್‍ವೈ ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗ ನೀವು ಯಾವ ವೇಷ ಹಾಕಿಕೊಂಡಿದ್ರಿ. ರಾಜ್ಯಪಾಲರಿಗೆ ಪತ್ರ ಬರೆದು ಆ ಮೇಲೆ ತಿರುಗಿ ಉಲ್ಟಾ ಹೊಡೆದ್ರಿ' ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ವೆಸ್ಟ್ ಎಂಡ್ ಹೊಟೇಲ್‍ನಲ್ಲಿ ನನ್ನನ್ನು ಯಡಿಯೂರಪ್ಪನವರ ವಿರುದ್ಧ ಎತ್ತಿಕಟ್ಟಲಿಲ್ವಾ ನೀವು. ನೀವು ಚುನಾವಣೆ ಪೂರ್ವದಲ್ಲಿ ಏನು ಮಾಡಿದ್ರೀ ಗೊತ್ತಿಲ್ಲ. ನನ್ನ ಬಗ್ಗೆ ಹಗುರವಾಗಿ ಮಾತನಾಡುವುದು ಬಿಡಬೇಕು' ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರದ ಆಸೆಗೆ ಮುಖ್ಯಮಂತ್ರಿ ಬದಲಾವಣೆ ಮಾಡಲು ಹೊಸದಿಲ್ಲಿಗೆ ಹೋಗಿ ಕಚಡ ರಾಜಕಾರಣ ಮಾಡುತ್ತಿರುವವರು ಬದಲು, ಹಳ್ಳಿ ಜನರಿಗೆ ಸಂಕಷ್ಟ ಬಂದು ಕೋವಿಡ್ ಹಾರೈಕೆ ಕೇಂದ್ರದಲ್ಲಿರುವ ನನ್ನ ಸೋಂಕಿತ ಬಂಧುಗಳ ನೋವನ್ನು ದೂರ ಮಾಡಲು ಅವರ ಹಿತಕ್ಕಾಗಿ ಕುಣಿತ ಹಾಕಿ ಮನರಂಜಿಸಿದೆ' ಎಂದು ರೇಣುಕಾಚಾರ್ಯ ವಿಡಿಯೋವೊಂದನ್ನು ಹಾಕಿ, ಸಿಎಂ ಬದಲಾವಣೆ ಪ್ರಯತ್ನಗಳಿಗೆ ತಿರುಗೇಟು ನೀಡಿದ್ದಾರೆ.





