ಫೇಸ್ಬುಕ್ ನಲ್ಲಿ ಆತ್ಮಹತ್ಯೆ ಪ್ರಯತ್ನದ ನೇರಪ್ರಸಾರ: ಬಂಗಾಳದ ನಟನನ್ನು ರಕ್ಷಿಸಿದ ಪೊಲೀಸರು

photo- twitter
ಕೋಲ್ಕತ್ತ, ಜೂ.9: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್ಡೌನ್ ನಿಂದ ಕೆಲಸವಿಲ್ಲದೆ ಖಿನ್ನತೆಗೆ ಒಳಗಾದ ಬಂಗಾಳದ ಕಿರುತೆರೆ ಕಲಾವಿದರೊಬ್ಬರು ನಿದ್ರೆಯ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಫೇಸ್ಬುಕ್ನಲ್ಲಿ ನೇರ ಪ್ರಸಾರ ಮಾಡಿದ್ದರಿಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ನನ್ನ ತಂದೆ ಕಳೆದ ವರ್ಷ ನಿಧನರಾಗಿದ್ದಾರೆ. ನನಗೆ 31 ವರ್ಷವಾದರೂ ಈಗಲೂ ನಿರುದ್ಯೋಗಿ. ಕುಟುಂಬದ ಆದಾಯ ಮೂಲವೆಂದರೆ ತಂದೆಯ ಪಿಂಚಣಿ ಹಣ ಮಾತ್ರ ಎಂದು ಆತ ಹೇಳಿದ್ದ. ನಿದ್ದೆ ಮಾತ್ರೆ ತೆಗೆದುಕೊಳ್ಳುತ್ತಿರುವ ವೀಡಿಯೋವನ್ನು ಆತ ಫೇಸ್ಬುಕ್ ನಲ್ಲಿ ನೇರ ಪ್ರಸಾರ ಮಾಡಿದ್ದಾನೆ. 10 ನಿಮಿಷದ ವೀಡಿಯೋದಲ್ಲಿ ಈತ ಹಾಡು ಹಾಡುತ್ತಾ, ಗಿಟಾರ್ ನುಡಿಸುತ್ತಾ ಒಂದೊಂದಾಗಿ ನಿದ್ದೆ ಮಾತ್ರೆ ಸೇವಿಸುತ್ತಾ, ಸರಿ, ನಾನಿನ್ನು ತೆರಳುತ್ತೇನೆ ಎಂದು ವೀಡಿಯೊ ಲೈವ್ ಮುಗಿಸುತ್ತಾನೆ.
ಈತ ಫೇಸ್ಬುಕ್ನಲ್ಲಿ ನೇರಪ್ರಸಾರ ಮಾಡುತ್ತಿರುವುದನ್ನು ವ್ಯಕ್ತಿಯೊಬ್ಬ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಸಕಾಲದಲ್ಲಿ ಆಗಮಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ತಾಯಿ ಮತ್ತು ಸಹೋದರಿ ಮನೆಯಲ್ಲಿಯೇ ಇದ್ದರೂ ಅವರಿಗೆ ಆತ್ಮಹತ್ಯೆ ಪ್ರಯತ್ನದ ಬಗ್ಗೆ ತಿಳಿದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.





