ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿನ ಸಮಸ್ಯೆಯೇ ಜಾಗತಿಕ ಲಸಿಕೆ ಕೊರತೆಗೆ ಕಾರಣ: ವರದಿ

ಹೊಸದಿಲ್ಲಿ, ಜೂ.9: ಕೊರೋನ ಸೋಂಕಿನ ವಿರುದ್ಧದ ಲಸಿಕೆಯನ್ನು ಜಗತ್ತಿನೆಲ್ಲೆಡೆ ಸಮಾನವಾಗಿ ವಿತರಿಸುವ, ವಿಶ್ವ ಆರೋಗ್ಯ ಸಂಸ್ಥೆ ಬೆಂಬಲಿತ ಅಭಿಯಾನ ‘ಕೊವ್ಯಾಕ್ಸ್’ಗೆ ಕಳೆದ ವರ್ಷ ಅತ್ಯಧಿಕ ಲಸಿಕೆ ಪೂರೈಸಿದ ಗೌರವಕ್ಕೆ ಪಾತ್ರವಾಗಿದ್ದ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಈ ವರ್ಷ ಉಂಟಾಗಿದ್ದ ಹಲವು ಸಮಸ್ಯೆಗಳು ಜಾಗತಿಕ ಲಸಿಕೆ ಕೊರತೆಗೆ ಕಾರಣ ಎಂದು ವರದಿಯೊಂದು ತಿಳಿಸಿದೆ.
ಲಸಿಕೆ ರಫ್ತಿನ ಮೇಲೆ ನಿಷೇಧ ವಿಧಿಸಿದ್ದು , ಸಂಸ್ಥೆಯಲ್ಲಿ ಉಂಟಾದ ಅಗ್ನಿ ದುರಂತ ಇತ್ಯಾದಿ ಸಮಸ್ಯೆಗಳು ಸಂಸ್ಥೆಯ ಲಸಿಕೆ ಪೂರೈಕೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದೆ. ಸುಮಾರು 92 ದೇಶಗಳಿಗೆ ಲಸಿಕೆ ರವಾನಿಸುವುದಾಗಿ ‘ಕೊವ್ಯಾಕ್ಸ್’ ಹೇಳಿದ್ದರೂ, ಈ ಅಭಿಯಾನಕ್ಕೆ ಗರಿಷ್ಟ ಲಸಿಕೆ ಒದಗಿಸುವ ಸೆರಂ ಸಂಸ್ಥೆಯಿಂದ ಕೇವಲ 30 ಮಿಲಿಯನ್ ಡೋಸ್ ಲಸಿಕೆ ಮಾತ್ರ ಲಭ್ಯವಾಗಿದೆ(200 ಮಿಲಿಯನ್ ಡೋಸ್ಗೆ ಬೇಡಿಕೆ ಸಲ್ಲಿಸಲಾಗಿತ್ತು).
ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಕೊರೋನ ಸೋಂಕಿನ ವಿರುದ್ಧದ ಲಸಿಕೀಕರಣ ಅಭಿಯಾನದಲ್ಲಿ ವಿಫಲವಾಗಿರುವುದಕ್ಕೆ ಸೆರಂನಲ್ಲಿನ ಬಿಕ್ಕಟ್ಟು ಪ್ರಮುಖ ಕಾರಣವಾಗಿದೆ ಮತ್ತು ಜಾಗತಿಕ ಸಮಸ್ಯೆಯ ಸಂದರ್ಭದಲ್ಲಿ ಒಂದೇ ಉತ್ಪಾದಕರ ಮೇಲೆ ಹೆಚ್ಚು ಅವಲಂಬಿತವಾಗಬಾರದು ಎಂಬ ಮುನ್ನೆಚ್ಚರಿಕೆಯಾಗಿದೆ ಎಂದು ವರದಿ ಹೇಳಿದೆ.
ಬಡ ರಾಷ್ಟ್ರಗಳಲ್ಲಿ ಕಳಪೆ ಗುಣಮಟ್ಟದ ಲಸಿಕೆ ಬಳಸುವುದರಿಂದ ಸೋಂಕಿನ ಇತರ ಅಪಾಯಕಾರಿ ಪ್ರಬೇಧಗಳು ಕಾಣಿಸಿಕೊಳ್ಳಬಹುದು ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಕೊವ್ಯಾಕ್ಸ್ ಅಭಿಯಾನ ಆರಂಭಿಸಲಾಗಿತ್ತು. ಈ ಅಭಿಯಾನಕ್ಕೆ ಇತರ ಸಂಸ್ಥೆಗಳ ಕೊಡುಗೆಯೂ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಿದ್ದರೂ, ಬಹುತೇಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಸೆರಂ ಸಂಸ್ಥೆಯ ಲಸಿಕೆಯನ್ನೇ ಹೆಚ್ಚು ಅವಲಂಬಿಸಿದ್ದರಿಂದ ಸೆರಂ ಸಂಸ್ಥೆಯ ವೈಫಲ್ಯ(ಬೇಡಿಕೆಯಷ್ಟು ಲಸಿಕೆ ಒದಗಿಸಲು) ಹೆಚ್ಚಿನ ಪರಿಣಾಮ ಬೀರಿದೆ.
ಭಾರತದಲ್ಲಿ ಕೊರೋನ ಸೋಂಕಿನ ವಿನಾಶಕಾರಿ ಎರಡನೇ ಅಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಸರಕಾರ ಕೋವಿಡ್ ಲಸಿಕೆಯ ರಫ್ತನ್ನು ನಿಷೇಧಿಸಿದ್ದರಿಂದ , ಎಪ್ರಿಲ್ ಬಳಿಕ ಸೆರಂ ಸಂಸ್ಥೆ ಲಸಿಕೆಯನ್ನು ರಫ್ತು ಮಾಡಿಲ್ಲ. ಆದರೆ ಇದಕ್ಕೂ ಮುನ್ನವೇ ಸೆರಂನ ಇತರ ಕೆಲವು ಸಮಸ್ಯೆಗಳು ಆರಂಭವಾಗಿದ್ದವು. 2020ರ ಅಂತ್ಯದೊಳಗೆ ಕೆಳ ಮತ್ತು ಮಧ್ಯಮ ವರ್ಗದ ದೇಶಗಳ ಬಳಕೆಗೆ 400 ಮಿಲಿಯನ್ ಡೋಸ್ ಕೋವಿಶೀಲ್ಡ್ ಲಸಿಕೆ ಒದಗಿಸುವುದಾಗಿ ಕಳೆದ ವರ್ಷ ಸೆರಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ ಪೂನಾವಾಲ ಘೋಷಿಸಿದ್ದರು.
ಬಳಿಕ 2021ರಲ್ಲಿ ಮತ್ತೊಂದು ಹೇಳಿಕೆ ನೀಡಿದ ಪೂನಾವಾಲ, ಭಾರತ ಸರಕಾರದಿಂದ ಲೈಸೆನ್ಸ್ ಯಾವಾಗ ಸಿಗುತ್ತದೆ ಎಂಬ ಬಗ್ಗೆ ಅನಿಶ್ಚಿತತೆ ಇರುವುದರಿಂದ ಮತ್ತು ದಾಸ್ತಾನಿಡಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಕೇವಲ 70 ಮಿಲಿಯನ್ ಡೋಸ್ ಲಸಿಕೆ ಮಾತ್ರ ಉತ್ಪಾದಿಸಲಾಗಿದೆ ಎಂದಿದ್ದರು. ಈ ಮಧ್ಯೆ , ಹಲವು ದೇಶಗಳು ಸೆರಂನೊಂದಿಗೆ ನೇರ ವ್ಯವಹಾರ ಒಪ್ಪಂದ ಮಾಡಿಕೊಂಡಿದ್ದವು. ಈ ದೇಶಗಳು ಈಗ ಇತರ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಬೇಕಾಗಿದೆ.
ನೆರೆಯ ದೇಶವಾದ ನೇಪಾಳದ ಸರಕಾರ ಸೆರಂನೊಂದಿಗೆ 4 ಮಿಲಿಯನ್ ಡೋಸ್ ಲಸಿಕೆಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಕೇವಲ 1 ಲಕ್ಷ ಡೋಸ್ ಲಸಿಕೆ ಮಾತ್ರ ಲಭಿಸಿದೆ . ಈಗ ಲಸಿಕೆಯ ಕೊರತೆಯಿಂದ ಸಮಸ್ಯೆಯಾಗಿದೆ ಎಂದು ನೇಪಾಳದ ಆರೋಗ್ಯ ಸಚಿವಾಲಯದ ಕುಟುಂಬ ಕಲ್ಯಾಣ ವಿಭಾಗದ ನಿರ್ದೇಶಕ ತಾರಾನಾಥ್ ಪೋಖ್ರೆಲ್ ಹೇಳಿದ್ದಾರೆ. ನೇಪಾಳಕ್ಕೆ ಕೊವ್ಯಾಕ್ಸ್ನಿಂದ ಒಟ್ಟು 13 ಮಿಲಿಯನ್ ಡೋಸ್ ಲಸಿಕೆ ಲಭಿಸಿದೆ. ಇದರಲ್ಲಿ ಭಾರತದಿಂದ ನೆರವಿನ ರೂಪದಲ್ಲಿ ಲಭಿಸಿದ 1 ಮಿಲಿಯನ್ ಡೋಸ್ ಲಸಿಕೆ ಸೇರಿದೆ ಎಂದವರು ಹೇಳಿದ್ದಾರೆ.
ಸಂಸ್ಥೆಯ ಉತ್ಪಾದನಾ ಸಾಮರ್ಥ್ಯ, ಕಡಿಮೆ ವೆಚ್ಚದ ಉತ್ಪಾದನೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಿಂದ ಮೊತ್ತಮೊದಲಿಗೆ ತುರ್ತುಬಳಕೆಯ ಅನುಮೋದನೆ ಪಡೆದ ಲಸಿಕೆಗಳಲ್ಲಿ ಸೆರಂನ ಲಸಿಕೆಯೂ ಸೇರಿದ್ದರಿಂದ ಈ ಸಂಸ್ಥೆಯನ್ನು ಕೊವ್ಯಾಕ್ಸ್ಗೆ ಅಧಿಕ ಲಸಿಕೆ ಪೂರೈಸಲು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಲಸಿಕೆ ಪೂರೈಕೆಯ ಒಕ್ಕೂಟ ‘ಗಾವಿ’ಯ ಸಿಇಒ ಸೆಥ್ ಬರ್ಕ್ಲೆ ಹೇಳಿದ್ದಾರೆ. ‘ಗಾವಿ’ ಕೊವ್ಯಾಕ್ಸ್ ಲಸಿಕೆ ಅಭಿಯಾನಕ್ಕೆ ಆರ್ಥಿಕ ನೆರವು ನೀಡುತ್ತದೆ. 2021ರ ಅಂತ್ಯದವರೆಗೆ ಲಸಿಕೆ ರಫ್ತು ಮಾಡಲು ಅನುಮತಿ ಲಭಿಸುವ ನಿರೀಕ್ಷೆಯಿಲ್ಲ . ಆ ಬಳಿಕವೂ ದೇಶದ ಬೇಡಿಕೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ ಎಂದು ಸೆರಂ ಹೇಳಿದೆ. ಈ ಹಿನ್ನೆಲೆಯಲ್ಲಿ ಈಗ ಚೀನಾದ ಲಸಿಕೆ ಉತ್ಪಾದಕರತ್ತ ಕೈಚಾಚುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಸಿನೊವ್ಯಾಕ್ ಬಯೊಟೆಕ್ ಮತ್ತು ಸಿನೊಫಾರ್ಮ ಗ್ರೂಪ್ ನ ಲಸಿಕೆಗಳು ಜಾಗತಿಕ ಬಳಕೆಗೆ ಯೋಗ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ . ಸೆರಂ ಸಂಸ್ಥೆ ಲಸಿಕೆ ಪೂರೈಸಲು ವಿಫಲವಾದ ಹಿನ್ನೆಲೆಯಲ್ಲಿ ಮೊದಲ ಡೋಸ್ ಲಸಿಕೆ ಅಭಿಯಾನವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದ್ದ ಬಾಂಗ್ಲಾದೇಶ ಈಗ ಚೀನಾದಿಂದ ಲಸಿಕೆ ಪಡೆದು ಲಸಿಕೆ ಅಭಿಯಾನ ಮುಂದುವರಿಸಿದೆ ಎಂದು ವರದಿ ಹೇಳಿದೆ.