ಕಲಬೆರಕೆ ಆಹಾರ ಪ್ರಕರಣ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ

ಹೊಸದಿಲ್ಲಿ, ಜೂ.9: ಕಲಬೆರಕೆ ಆಹಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ಮಧ್ಯಪ್ರದೇಶದ ಇಬ್ಬರು ಉದ್ಯಮಿಗಳು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ. ಭಾರತದಲ್ಲಿ ಮಾತ್ರ ನಾವು ಆಹಾರದ ಸುರಕ್ಷತೆ ವಿಷಯದಲ್ಲಿ ಧಾರಾಳವಾಗಿದ್ದೇವೆ .
ನೀವು ಈ ಕಲಬೆರಕೆಯಾದ ಗೋಧಿಯನ್ನು ತಿನ್ನುತ್ತೀರಾ? ಎಂದು ಆರೋಪಿಗಳ ಪರ ವಕೀಲರನ್ನು ಸುಪ್ರೀಂಕೋರ್ಟ್ ನ್ಯಾಯಪೀಠ ಪ್ರಶ್ನಿಸಿತು. ಮಧ್ಯಪ್ರದೇಶದ ಉದ್ಯಮಿಗಳಾದ ಪ್ರವಾರ್ ಗೋಯಲ್ ಮತ್ತು ವಿನೀತ್ ಗೋಯಲ್ ಗೋಧಿಗೆ ಚಿನ್ನದ ಬಣ್ಣವನ್ನು ಪಾಲಿಶ್ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
2020ರ ಡಿಸೆಂಬರ್ 3ರಂದು ಇವರ ಕಾರ್ಖಾನೆಗೆ ದಾಳಿ ಮಾಡಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು 27.74 ಲಕ್ಷ ರೂ. ಮೌಲ್ಯದ 1,20,620 ಕಿ.ಗ್ರಾಂ ಕಲಬೆರಕೆ ಗೋಧಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು. ಸಂಸ್ಥೆಯ ಮಾಲಕರಾದ ಪ್ರವಾರ್ ಗೋಯಲ್ ಮತ್ತು ವಿನೀತ್ ಗೋಯಲ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ಗೆ ಅರ್ಜಿ ದಾಖಲಿಸಿದ್ದರು. ಸುಪ್ರೀಂಕೋರ್ಟ್ ಕೂಡಾ ಮೇಲ್ಮನವಿಯನ್ನು ತಳ್ಳಿಹಾಕಿದೆ.





