ಪೊಲೀಸರ ಹತ್ಯೆ ಆರೋಪಿಗಳಾದ ಪಂಜಾಬ್ ನ ಇಬ್ಬರು ಕಳ್ಳಸಾಗಾಣಿಕೆದಾರರನ್ನು ಬಂಗಾಳದಲ್ಲಿ ಗುಂಡಿಕ್ಕಿ ಹತ್ಯೆ

ವಿ. ಕೆ. ಗೋಯಲ್, photo: ANI
ಚಂಡೀಗಢ: ಲುಧಿಯಾನದಲ್ಲಿ ಇಬ್ಬರು ಪೊಲೀಸರನ್ನು ಕೊಂದ ಆರೋಪಕ್ಕೊಳಗಾದ ಬಳಿಕ ಪರಾರಿಯಾಗಿದ್ದ ಪಂಜಾಬ್ನ ಇಬ್ಬರು ಮಾದಕವಸ್ತು ಕಳ್ಳಸಾಗಣೆದಾರರನ್ನು ಪಶ್ಚಿಮ ಬಂಗಾಳ ಪೊಲೀಸರು ಬುಧವಾರ ಕೋಲ್ಕತಾ ಹೊರವಲಯದಲ್ಲಿರುವ ವಸತಿ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಗುಂಡಿಕ್ಕಿ ಕೊಂದಿದ್ದಾರೆ.
ಜೈಪಾಲ್ ಸಿಂಗ್ ಭುಲ್ಲರ್ ಹಾಗೂ ಜಸ್ಪ್ರೀತ್ ಸಿಂಗ್ ಅವರು ಅಡಗಿ ಕುಳಿತ್ತಿದ್ದ ಅಪಾರ್ಟ್ ಮೆಂಟ್ ಗೆ ದಾಳಿ ನಡೆಸಿದಾಗ ಈ ಇಬ್ಬರು ವಿಶೇಷ ಕಾರ್ಯಪಡೆಯ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾಗ ಆಗ ಇಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ದಿನಕರ್ ಗುಪ್ತಾ ತಿಳಿಸಿದ್ದಾರೆ.
ಕೆಲವು ಅಪರಾಧಿಗಳು ಅಪಾರ್ಟ್ಮೆಂಟ್ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ತಮಗೆ ದೊರೆಕಿತ್ತು ಎಂದು ವಿಶೇಷ ಕಾರ್ಯಪಡೆಯ ಮುಖ್ಯಸ್ಥ ವಿ. ಕೆ. ಗೋಯಲ್ ಹೇಳಿದ್ದಾರೆ.
"ನಾವು ದಾಳಿಗಾಗಿ ಬಂದಾಗ, ಪಂಜಾಬ್ ನಲ್ಲಿ ಹಲವಾರು ಪ್ರಕರಣಗಳಲ್ಲಿ ಜಸ್ಪ್ರೀತ್ ಹಾಗೂ ಜೈಪಾಲ್ ಅವರು ಬೇಕಾಗಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ನಾವು ಅವರನ್ನು ಬಂಧಿಸಲು ಪ್ರಯತ್ನಿಸಿದೆವು. ಆದರೆ ಅವರು ನಮ್ಮ ಮೇಲೆ ಪ್ರತಿರೋಧ ವ್ಯಕ್ತಪಡಿಸಿದರು ಹಾಗೂ ಗುಂಡು ಹಾರಿಸಿದರು. ಪ್ರತೀಕಾರವಾಗಿ, ನಾವು ಕೂಡ ಗುಂಡು ಹಾರಿಸಿದ್ದೇವೆ ಹಾಗೂ ಅವರನ್ನು ಗುಂಡಿಕ್ಕಿ ಕೊಂದಿದ್ದೇವೆ" ಎಂದು ಗೋಯಲ್ ಹೇಳಿದರು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
“ಗುಂಡಿನ ಚಕಮಕಿಯಲ್ಲಿ ಇನ್ಸ್ಪೆಕ್ಟರ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 7 ಲಕ್ಷ ರೂ. ನಗದು, ಐದು ಶಸ್ತ್ರಾಸ್ತ್ರಗಳು ಹಾಗೂ 89 ಸಜೀವ ಸುತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅವರು ಹೇಳಿದರು.