ಕಾರ್ಕಳ: ತಾಲೂಕು ಕಚೇರಿಗೆ ವೈದ್ಯಕೀಯ ಸಾಮಗ್ರಿ ವಿತರಣೆ

ಕಾರ್ಕಳ, ಜೂ.9: ಕೊರೋನ ಮಹಾಮಾರಿ ಮೂರನೆ ಅಲೆ ತಡೆಯಲು ಈಗಿಂದಲೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಆಸ್ಪತ್ರೆ, ವೈದ್ಯರ ನೇಮಕ ಇವೆಲ್ಲ ಸಿದ್ಧತೆಗಳ ಕುರಿತು ಅಧಿಕಾರಿಗಳ ಜತೆ ಮೊದಲ ಸುತ್ತಿನ ಸಭೆಯನ್ನು ಈಗಾಗಲೇ ನಡೆಸಿದ್ದು, ಹೆಚ್ಚುವರಿ ತಜ್ಞರು ಮತ್ತು ಮಕ್ಕಳ ತಜ್ಞರ ನೇಮಕಕ್ಕೆ ಸಂಬಂದಿಸಿ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ವಿ.ಸುನೀಲ್‍ಕುಮಾರ್ ಹೇಳಿದರು.
ಉದ್ಯಮಿ ಮಹಮ್ಮದ್ ಗೌಸ್ ತಾಲೂಕು ಕಚೇರಿಗೆ ಕೊಡಮಾಡಿದ ಮಾಸ್ಕ್, ಸ್ಯಾನಿಟೈಸರ್ ಮೊದಲಾದ ವೈದ್ಯಕೀಯ ಸಾಮಗ್ರಿಗಳನ್ನು ಪ್ರವಾಸಿ ಮಂದಿರದಲ್ಲಿ ಹಸ್ತಾಂತರಿಸಿ ಅವರು ಮಾತನಾಡಿದರು.
ಮೂರನೆ ಸೋಂಕಿನ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುವ ಬಗ್ಗೆ ತಜ್ಞರು, ವೈದ್ಯರು ಸೂಚನೆ ನೀಡಿದ್ದಾರೆ. ಮಕ್ಕಳ ಮೇಲೆ ಹೆಚ್ಚು ಪರಿಣಾಮ ಎನ್ನುತ್ತಿದ್ದರೂ ಖಚಿತವಾಗಿ ಹೇಳಲು ಅಸಾಧ್ಯ. ಹೆಚ್ಚಿನ ಹಾನಿ ತಪ್ಪಿಸಲು ಮುನ್ನೆಚ್ಚರಿಕೆಯಾಗಿ ಬೇಕಾದ ಕ್ರಮ ವಹಿಸುತ್ತಿರುವುದಾಗಿ ಅವರು ಹೇಳಿದರು.
ಲಸಿಕೆ ವಿತರಣೆಯಲ್ಲಿ ಜಿಲ್ಲೆಯಲ್ಲಿ ಕಾರ್ಕಳ ತಾಲೂಕು ಮುಂಚೂಣಿಯಲ್ಲಿದೆ ಎಂದರು. ಕೊರೋನ ಸೋಂಕು ತಡೆ ವಿರುದ್ಧದ ಸಮರ ಮುಂದುವರೆಯುತ್ತಿದ್ದು, ಶೀಘ್ರ ಕೊರೋನ ಮುಕ್ತರಾಗಲಿದ್ದೇವೆ ಎಂದರು.
ಈ ಸಂದರ್ಭ ಉದ್ಯಮಿ ಮಹಮ್ಮದ್ ಗೌಸ್‍ರವರು ಪತ್ರಕರ್ತರ ಸಂಘದ ಸದಸ್ಯರಿಗೆ ಆಕ್ಸಿಮೀಟರ್ ಅನ್ನು ನೀಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಮುಹಮ್ಮದ್ ಶರೀಪ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಜಗದೀಶ್ ಆರ್‍ಬಿ, ಜಿಲ್ಲಾ ಸಮಿತಿಯ ಹರಿಪ್ರಸಾದ್ ನಂದಳಿಕೆ, ಕಾರ್ಯದರ್ಶಿ ಕೃಷ್ಣ ಅಜೆಕಾರ್ ಮೊದಲಾದವರು ಉಪಸ್ಥಿತರಿದ್ದರು.
ಹೆಬ್ರಿ ತಾ. ಆಸ್ಪತ್ರೆಯಾಗಿ ಶೀಘ್ರ ಮೇಲ್ದರ್ಜೆಗೆ
ಹೆಬ್ರಿಯ ಸಮುದಾಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರಕಾರದಿಂದ ಶಿಫಾರಸ್ಸು ಆಗಿದೆ. ಆರೋಗ್ಯ ಸಚಿವ ಸುಧಾಕರ್ ಅವರು ಒಪ್ಪಿಗೆ ನೀಡಿ ಹಣಕಾಸು ಇಲಾಖೆಗೆ ಕಳುಸಿಕೊಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಹೆಬ್ರಿಯ ಸಮುದಾಯ ಆಸ್ಪತ್ರೆ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರುವ ವಿಶ್ವಾಸವಿದೆ ಎಂದರು.







