ಹೂವಿನಹಡಗಲಿ: ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಸ್‌ದರ್ ವತಿಯಿಂದ ದಿನಸಿ, ತರಕಾರಿ ವಿತರಣೆ
ವಿಜಯನಗರ, ಜೂ.9: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಳ್ಳಿಗಳಲ್ಲಿರುವ ದಿನಗೂಲಿ ಕೆಲಸ ಮಾಡಿ ಜೀವಿಸುವ ಬಡ ಕುಟುಂಬಗಳು ಲಾಕ್‌ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಮಸ್‌ದರ್ ಎಜ್ಯು ಆಂಡ್ ಚಾರಿಟಿ ವತಿಯಿಂದ ದಿನಸಿ ಸಾಮಗ್ರಿಗಳು ಹಾಗೂ ತರಕಾರಿಗಳಿರುವ ಕಿಟ್‌ಗಳನ್ನು ಜಿಲ್ಲೆಯ ವಿವಿಧ ಹಳ್ಳಿಗಳಿಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಬಂಗಾರಪ್ಪ ನಗರ ಗ್ರಾಮದಲ್ಲಿ ಪುರಸಭೆ ಅಧ್ಯಕ್ಷ ವಾರದ ಗೌಸ್ ಮೊಯಿದೀನ್ ಅವರು ಚಾಲನೆ ನೀಡಿದರು.
ಮಸ್‌ದರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಮಾತನಾಡಿ, ತಿಂಗಳಿಗೆ 100-200 ರೂಪಾಯಿ ಬಾಡಿಗೆ ಕೊಟ್ಟು ತೆಂಗಿನ ಗರಿಗಳಿಂದ ನಿರ್ಮಿಸಿದ ಪುಟ್ಟ ಗುಡಿಸಲುಗಳಲ್ಲಿ ಜೀವಿಸುವ ಇಲ್ಲಿನ ಬಡ ಜನರು ಲಾಕ್‌ಡೌನ್ ಕಾರಣದಿಂದ ಬಹಳಷ್ಟು ಸಂಕಷ್ಟಗಳಿಗೆ ಸಿಲುಕಿದ್ದು ಜಾತಿ ಧರ್ಮಗಳ ವ್ಯತ್ಯಾಸವಿಲ್ಲದೆ ಇಲ್ಲಿನ ಬಡವರ ಹಸಿವು ನೀಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮಸ್‌ದರ್ ಸಂಸ್ಥೆಯು ಈ ಬಡವರ ಹಸಿವು ನೀಗಿಸಲು ಪ್ರಯತ್ನಿಸಲಿದೆ. ಈ ಹಿಂದೆಯೂ ಈ ಗ್ರಾಮದಲ್ಲಿ ಆಹಾರ ಪೊಟ್ಟಣಗಳನ್ನು ಇನ್ನಿತರ ಸಾಮಗ್ರಿಗಳನ್ನು ಮಸ್‌ದರ್ ವತಿಯಿಂದ ನೀಡಿದ್ದು ಮುಂದೆಯೂ ಈ ಪ್ರದೇಶಗಳ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ಹೇಳಿದರು.
ಹೂವಿನ ಹಡಗಲಿ ತಹಶಿಲ್ದಾರ್ ಮಹೇಂದ್ರ, ಕೊಟ್ಟೂರು ತಹಶೀಲ್ದಾರ್ ಅನಿಲ್ ಕುಮಾರ್, ಪುರಸಭೆಯ ಮುಖ್ಯಾಧಿಕಾರಿ ನಾಸಿರ್ ಪಾಷಾ, ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ಅಯ್ಯನ ಗೌಡ್ರು, ಮಸ್‌ದರ್ ಜನರಲ್ ಮ್ಯಾನೇಜರ್ ಸಿದ್ದೀಕ್ ಸಖಾಫಿ ಕೊಪ್ಪಳ, ಮಸ್‌ದರ್ ಕಾರ್ಯದರ್ಶಿ ಹಾಫಿಝ್ ಅನಸ್ ಅಹ್ಸನಿ ಹೊಸಪೇಟೆ, ನಾಸಿರ್ ಸಖಾಫಿ ಗಂಗಾವತಿ, ಫಹದ್ ಸಾಬಿತ್ ಕಾರ್ಕಳ, ಜೀಲಾನ್ ಪಾಷಾ, ಝಮೀರ್ ಸ್ವಾಮಿ ಡಿ ಚಂದು, ಇರ್ಫಾನ್ ಮುಂತಾದವರು ಉಪಸ್ಥಿತರಿದ್ದರು.





