ರೈತರ ಪ್ರತಿಭಟನೆ ಮಧ್ಯೆ ಖಾರಿಫ್ ಕನಿಷ್ಠ ಬೆಂಬಲ ಬೆಲೆ ಶೇ. 62ರ ವರೆಗೆ ಏರಿಸಿದ ಕೇಂದ್ರ

ಹೊಸದಿಲ್ಲಿ, ಜೂ. 9: ಸಂಪುಟ ಬುಧವಾರ ನಿರ್ಧಾರ ತೆಗೆದುಕೊಂಡ ಬಳಿಕ ಕೇಂದ್ರ ಸರಕಾರ ಖಾರಿಫ್ ಬೆಳೆ (ಬೇಸಿಗೆ ಕಾಲದಲ್ಲಿ ಬಿತ್ತನೆ ಮಾಡುವ ಬೆಳೆ)ಗಳ ಕನಿಷ್ಠ ಬೆಂಬಲ ಬೆಲೆಯನ್ನು ಶೇ. 50ರಿಂದ ಶೇ. 62ರ ವರೆಗೆ ಏರಿಕೆ ಮಾಡಿದೆ.
ಖಾಸಗಿ ವ್ಯಾಪಾರಿಗಳಿಗೆ ಕನಿಷ್ಠ ಬೆಲೆಯ ಸೂಚನೆ ನೀಡುವ ಮೂಲಕ ಮಾರಾಟದಲ್ಲಾಗುವ ತೊಂದರೆ ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರ ನಿರ್ಧರಿಸುವ ಧಾನ್ಯದ ಬೆಲೆ ಕನಿಷ್ಠ ಬೆಂಬಲ ಬೆಲೆಯಾಗಿದೆ. ರಾಜ್ಯ ಸ್ವಾಮಿತ್ವದ ‘ಫುಡ್ ಕಾರ್ಪೋರೇಶನ್ ಇಂಡಿಯಾ’ದ ಮೂಲಕ ಕೇಂದ್ರ ಸರಕಾರ ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ದೊಡ್ಡ ಪ್ರಮಾಣದ ಸಿರಿಧಾನ್ಯಗಳನ್ನು ಖರೀದಿಸುತ್ತದೆ. ಅಲ್ಲದೆ, ಅದನ್ನು ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್) ಮೂಲಕ ವಿತರಣೆ ಮಾಡುತ್ತದೆ.
ಕೇಂದ್ರ ಸರಕಾರ ವರ್ಷದಲ್ಲಿ ಎರಡು ಬಾರಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡುತ್ತದೆ. ಒಂದು ರಾಬಿ ಬೆಳೆ ಸಂದರ್ಭ. ಇನ್ನೊಂದು ಖಾರಿಫ್ ಬೆಳೆ ಸಂದರ್ಭ. 2021-22ರ ಖಾರಿಫ್ ಕಾಲದಲ್ಲಿ ಅಕ್ಕಿಯಂತಹ ಖಾರಿಫ್ ಬೆಳೆಗಳನ್ನು ದೇಶಾದ್ಯಂತ 56.50 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಸಲಾಗಿದೆ ಎಂದು ಕೃಷಿ ಇಲಾಖೆ ಮಾರ್ಚ್ ನಲ್ಲಿ ಬಿಡುಗಡೆ ಮಾಡಿದ ವರದಿ ಹೇಳಿದೆ. ರೈತರು ರಾಬಿ ಬೆಳೆಯ ಕೊಯ್ಲು ಮಾಡಿದ ಬಳಿಕ ಖಾರಿಫ್ ಬೆಳೆಯ ಕೊಯ್ಲು ಆರಂಭ ಮಾಡುತ್ತಾರೆ. ಈ ಬೆಳೆಗಳು ಮಳೆಯಾಶ್ರಿತ. ನೈಋತ್ಯ ಮಾನ್ಸೂನ್ ಆರಂಭವಾಗುವ ಜೂನ್ ನಿಂದ ಈ ಬೆಳೆಗಳ ಬಿತ್ತನೆ ಆರಂಭವಾಗುತ್ತದೆ.







