ವೇಗ, ಸುರಕ್ಷಿತ ರೈಲು ಸಂಚಾರಕ್ಕೆ 25 ಸಾವಿರ ಕೋಟಿ ರೂ. ಯೋಜನೆ: ಕೇಂದ್ರ ಸರಕಾರ ಅನುಮೋದನೆ

ಹೊಸದಿಲ್ಲಿ, ಜೂ. 10: ರೈಲು ನಿಲ್ದಾಣಗಳು, ರೈಲುಗಳ ಸಾರ್ವಜನಿಕ ಸುರಕ್ಷೆ ಹಾಗೂ ಭದ್ರತೆಯ ಸೇವೆಗೆ ಭಾರತೀಯ ರೈಲ್ವೆಗೆ 700 ಮೆಗಾ ಹಟ್ಝ್ ತರಂಗಾಂತರ ಬ್ಯಾಂಡ್ನಲ್ಲಿ 5 ಮೆಗಾ ಹರ್ಟ್ಸ್ ಮುಂಜೂರು ಮಾಡಲು ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಯೋಜನೆಗೆ 25,000 ಕೋಟಿ ರೂಪಾಯಿಗೂ ಅಧಿಕ ಹೂಡಿಕೆ ಅಂದಾಜಿಸಲಾಗಿದೆ ಎದು ರೈಲ್ವೆ ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ಸ್ಪ್ರೆಕ್ಟಂನಿಂದ ಭಾರತೀಯ ರೈಲ್ವೆ ತನ್ನ ಮಾರ್ಗಗಳಲ್ಲಿ ಎಲ್ಟಿಇ (ಲಾಂಗ್ ಟರ್ಮ್ ಇವೊಲ್ಯೂಶನ್) ಆಧಾರದಲ್ಲಿ ಮೊಬೈಲ್ ರೈಲು ರೇಡಿಯೊ ಸಂವಹನ ಒದಗಿಸಲಿದೆ ಎಂದು ಹೇಳಿಕೆ ತಿಳಿಸಿದೆ. ರಕ್ಷಣೆ ಕ್ರಮ ಅನುಸರಿಸಲು ಹಾಗೂ ಕಾರ್ಯಾಚರಣೆಗೆ ಭದ್ರತೆಯ ಹಾಗೂ ನಂಬಿಕಾರ್ಹ ಧ್ವನಿ, ವೀಡಿಯೊ ಹಾಗೂ ದತ್ತಾಂಶ ಸಂವಹನ ಸೇವೆ ಒದಗಿಸುವ ಉದ್ದೇಶದಿಂದ ಭಾರತೀಯ ರೈಲ್ವೆಗೆ ಎಲ್ಟಿಇ ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಇದು ಆಧುನಿಕ ಸಿಗ್ನಲಿಂಗ್ ಹಾಗೂ ರೈಲು ರಕ್ಷಣೆಯ ವ್ಯವಸ್ಥೆಯನ್ನು ಬಳಸಲಿದೆ. ರೈಲಿನ ಚಾಲಕ ಹಾಗೂ ಗಾರ್ಡ್ ನಡುವಿನ ಸಂವಹನಕ್ಕೆ ತಡೆರಹಿತ ಖಾತರಿ ನೀಡಲಿದೆ. ಈ ಹೊಸ ವ್ಯವಸ್ಥೆಯಿಂದ ಕೋಚ್ಗಳು, ವೇಗನ್ಗಳು ಹಾಗೂ ಲೋಕೋಮೋಟಿವ್ ಗಳ ಬಗ್ಗೆ ನಿಗಾ ವಹಿಸಲು ಸಾಧ್ಯವಾಗಲಿದೆ ಹಾಗೂ ರೈಲು ವೇಗವಾಗಿ ಹಾಗೂ ಸುರಕ್ಷಿತವಾಗಿ ಕಾರ್ಯಾಚರಿಸಲು ರೈಲಿನ ಕೋಚ್ ನ ಒಳಗಿನ ಸಿಸಿಟಿವೆ ಕೆಮರಾಗಳು ನೆರವಾಗಲಿವೆ ಎಂದು ರೈಲ್ವೆ ತಿಳಿಸಿದೆ. ಇದಲ್ಲದೆ, ರೈಲು ಅಪಘಾತಗಳನ್ನ ತಪ್ಪಿಸಲು ಹಾಗೂ ರೈಲು ಪ್ರಯಾಣಿಕರ ಸುರಕ್ಷಿತ ಪ್ರಯಾಣದ ಖಾತರಿ ನೀಡಲು ರೈಲು ಢಿಕ್ಕಿ ತಪ್ಪಿಸುವ ವ್ಯವಸ್ಥೆ (ಟಿಸಿಎಎಸ್) ಯನ್ನು ರೈಲ್ವೆ ಅನುಮೋದನೆ ನೀಡಿದೆ.