ಮನೆಯವರಿಗೆ ತಿಳಿಯದಂತೆ 10 ವರ್ಷ ಪ್ರೇಯಸಿಯನ್ನು ಕೊಠಡಿಯಲ್ಲಿ ಬಚ್ಚಿಟ್ಟಿದ್ದ ಯುವಕ: ಕೇರಳದಲ್ಲಿ ಹೀಗೊಂದು ಪ್ರೇಮಕಥೆ

Photo: newindianexpress
ಪಾಲಕ್ಕಾಡ್: ಮನೆಯಲ್ಲಿರುವವರಿಗೆ ತಿಳಿಯದಂತೆ ತನ್ನ ಪ್ರೇಯಸಿಯನ್ನು ತನ್ನದೇ ಮನೆಯ ಕೊಠಡಿಯಲ್ಲಿ 10 ವರ್ಷಗಳ ಕಾಲ ಯುವಕನೋರ್ವ ಬಚ್ಚಿಟ್ಟ ವಿಷಯ ಸದ್ಯ ಬೆಳಕಿಗೆ ಬಂದಿದೆ. ವಿಚಾರ ತಿಳಿದಿಂತೆ ಮನೆಯ ಸದಸ್ಯರು ಸೇರಿದಂತೆ ಊರಿನವರು ಮತ್ತು ಯುವತಿಯ ಮನೆಯವರು ಆಶ್ಚರ್ಯಚಕಿತರಾಗಿದ್ದಾರೆ.
ರಹ್ಮಾನ್ (34) ಹಾಗೂ ಸಜಿತಾ (28) ಇಬ್ಬರೂ ಪಾಲಕ್ಕಾಡ್ ಸಮೀಪದ ಅಯಿಲೂರಿನ ನಿವಾಸಿಗಳಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಂತರ್ ಧರ್ಮೀಯವಾದ ಕಾರಣ ತಮ್ಮ ಪ್ರೀತಿಯನ್ನು ಕುಟುಂಬಸ್ಥರು ಒಪ್ಪುವುದಿಲ್ಲವೆಂದು ತಿಳಿದು ಸಜಿತಾ ಫೆಬ್ರವರಿ,2, 2010ರಂದು ಮನೆಯಿಂದ ತೆರಳಿದ್ದಳು ಎನ್ನಲಾಗಿದೆ. ಈ ವೇಳೆ ರಹ್ಮಾನ್ ಆಕೆಯನ್ನು ತನ್ನ ಮನೆಗೆ ಕರೆತಂದು ಯಾರಿಗೂ ತಿಳಿಯದಂತೆ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ಎನ್ನಲಾಗಿದೆ.
ದಿನಂಪ್ರತಿ ಆಕೆಗೆ ಆಹಾರ ಒದಗಿಸುತ್ತಿದ್ದು, ನಿತ್ಯಕ್ರಿಯೆಗಳಿಗಾಗಿ ಮಾತ್ರ ರಾತ್ರಿ ಕೊಠಡಿಯಿಂದ ಹೊರ ಬರುತ್ತಿದ್ದಳು ಎನ್ನಲಾಗಿದೆ. ತಾನು ಖಿನ್ನತೆಯಿಂದ ಬಳಲುತ್ತಿದ್ದು, ಯಾರೂ ತನ್ನ ಕೊಠಡಿಗೆ ಬಾರದಂತೆ ಆತ ಅಭಿನಯವನ್ನೂ ಮಾಡಿದ್ದ ಎನ್ನಲಾಗಿದೆ. ಆದರೆ ಈ ವಿಚಾರ ಬಯಲಿಗೆ ಬಂದದ್ದು ಇದ್ದಕ್ಕಿಂದ್ದಂತೆ ರಹ್ಮಾನ್ ನಾಪತ್ತೆಯಾದ ವೇಳೆಯಾಗಿತ್ತು. ಸುಮಾರು ಮೂರು ತಿಂಗಳವರೆಗೆ ರಹ್ಮಾನ್ ಪತ್ತೆಯೇ ಇರದಿದ್ದಾಗ ಮನೆಯವರು ಪೊಲೀಸ್ ಪ್ರಕರಣ ದಾಖಲಿಸಿದ್ದರು.
ಪೊಲೀಸರು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ರಹ್ಮಾನ್ ನನ್ನು ಪೊಲೀಸರು ಪತ್ತೆಹಚ್ಚಿ ಠಾಣೆಗೆ ಕರೆತಂದಾಗ ಆತ ನಡೆದ ಘಟನೆಯನ್ನು ಹೇಳಿದ್ದ. "ನಾನು ಆಕೆಯನ್ನು ಹತ್ತು ವರ್ಷಗಳ ಕಾಲ ನನ್ನ ಕೊಠಡಿಯಲ್ಲಿ ಬಚ್ಚಿಟ್ಟಿದ್ದೆ. ಬೇರೆ ಮನೆ ಮಾಡಲು ನಮ್ಮಲ್ಲಿ ಹಣವಿರಲಿಲ್ಲ. ಆದರೆ ಮೂರು ತಿಂಗಳ ಹಿಂದೆ ನಾವು ಬೇರೆಯೇ ಬಾಡಿಗೆ ಮನೆ ಮಾಡಿ ವಾಸಿಸಲು ಪ್ರಾರಂಭಿಸಿದೆವು" ಎಂದು ರಹ್ಮಾನ್ ಹೇಳಿಕೆ ನೀಡಿದ್ದಾನೆ. "ಮೊದಲು ನಮಗೂ ನಂಬಲಾಗಿಲ್ಲ. ಬಳಿಕ ಇಬ್ಬರನ್ನೂ ಬೇರೆಯೇ ವಿಚಾರಣೆ ಮಾಡಿದಾಗ ಎಲ್ಲ ವಿಚಾರಗಳು ಸತ್ಯವೆಂದು ಮನವರಿಕೆಯಾಗಿದೆ" ಎಂದು ನೆನ್ಮರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನೌಫಲ್ ಹೇಳಿದ್ದಾರೆ.
ಸಜಿತಾ ತನ್ನ ಮನೆಯಿಂದ ಹೊರಬಿದ್ದ ಸಂದರ್ಭದಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಲಾಗಿತ್ತು. ಪೊಲೀಸರು ಈ ಕುರಿತು ರಹ್ಮಾನ್ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿದ್ದರು. ಬಳಿಕ ಮನೆಯವರು ಆಕೆ ಮತೃಪಟ್ಟಿರಬಹುದೆಂದು ಭಾವಿಸಿ ರೇಶನ್ ಕಾರ್ಡ್ ನಿಂದ ಹೆಸರನ್ನೂ ತೆರವುಗೊಳಿಸಿದ್ದರು ಎಂದು ತಿಳಿದು ಬಂದಿದೆ. ಇದೀಗ ಆಕೆ ರಹ್ಮಾನ್ ಜೊತೆಯಲ್ಲಿ ಜೀವಿಸುತ್ತೇನೆಂದು ಹೇಳಿದ್ದು, ಪೊಲೀಸರು ಎರಡೂ ನಾಪತ್ತೆ ಪ್ರಕರಣಗಳನ್ನು ಕೊನೆಗೊಳಿಸಿದ್ದಾರೆ.
ಕೃಪೆ: newindianexpress