ಸ್ಟಾನ್ ಸ್ವಾಮಿ ಜೂ.18ರ ತನಕ ಖಾಸಗಿ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ: ಬಾಂಬೆ ಹೈಕೋರ್ಟ್
ಎಲ್ಗರ್ ಪರಿಷತ್ ಪ್ರಕರಣ

ಮುಂಬೈ: ಎಲ್ಗರ್ ಪರಿಷತ್ ಹಾಗೂ ಮಾವೋವಾದಿ ನಂಟು ಪ್ರಕರಣದಲ್ಲಿ ಬಂಧಿಸಲ್ಪಟ್ಟ ಸಾಮಾಜಿಕ ಹೋರಾಟಗಾರ ಸ್ಟಾನ್ ಸ್ವಾಮಿ ಅವರು ಕೋವಿಡ್ -19 ನಿಂದ ಬಳಲುತ್ತಿರುವ ಕಾರಣ ಜೂನ್ 18 ರವರೆಗೆ ಮುಂಬೈ ಮೂಲದ ಖಾಸಗಿ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಗುರುವಾರ ತಿಳಿಸಿದೆ.
84 ರ ಹರೆಯದ ಸ್ವಾಮಿ ಅವರು ಮೇ 28 ರಂದು ನೆರೆಯ ನವಿ ಮುಂಬಯಿಯ ತಲೋಜ ಜೈಲಿನಿಂದ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ ನಂತರ ಇಲ್ಲಿನ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ, ಅವರು ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದರು. ಅಕ್ಟೋಬರ್ 2020 ರಲ್ಲಿ ಬಂಧನಕ್ಕೊಳಗಾದ ನಂತರ ಅವರನ್ನು ತಲೋಜ ಜೈಲಿನಲ್ಲಿ ಇರಿಸಲಾಯಿತು.
ಸ್ವಾಮಿ ಅವರು ಕೋವಿಡ್-19 ಗೆ ಸೋಂಕಿಗೆ ಒಳಗಾಗಿದ್ದಾರೆ. ಆದ್ದರಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳುವುದನ್ನು ವಿಸ್ತರಿಸಬೇಕು ಎಂದು ಸ್ವಾಮಿ ಅವರ ವಕೀಲ ಮಿಹಿರ್ ದೇಸಾಯಿ ಅವರು ನ್ಯಾಯಮೂರ್ತಿಗಳಾದ ಎಸ್. ಎಸ್. ಶಿಂಧೆ ಹಾಗೂ ಎನ್ .ಜೆ. ಜಮಾದರ್ ಅವರ ವಿಭಾಗೀಯ ಪೀಠಕ್ಕೆ ಗುರುವಾರ ವಿನಂತಿಸಿದರು.
ಜೂನ್ 18 ರವರೆಗೆ ಸ್ವಾಮಿಯವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂದು ನ್ಯಾಯಪೀಠ ಹೇಳಿದೆ ಹಾಗೂ ಜೂನ್ 17 ರಂದು ಮುಂದಿನ ವಿಚಾರಣೆ ನಡೆಯಲಿದೆ.