ಇದುವರೆಗೆ ಅರ್ಧದಷ್ಟು ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಸಂಪೂರ್ಣ ಲಸಿಕೆ: ವರದಿ

photo: The New Indian Express
ಹೊಸದಿಲ್ಲಿ: ಜನವರಿ ಮಧ್ಯದಲ್ಲಿ ರಾಷ್ಟ್ರವ್ಯಾಪಿ ಲಸಿಕೆ ನೀಡಿದೆ ಅಭಿಯಾನ ಆರಂಭವಾದ ಸುಮಾರು ಐದು ತಿಂಗಳ ನಂತರ ಭಾರತದಲ್ಲಿ ಶೇಕಡಾ 60 ಕ್ಕಿಂತಲೂ ಕಡಿಮೆ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ವಿರುದ್ಧ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ ಎಂದು The New Indian Express ವರದಿ ಮಾಡಿದೆ.
ದೇಶದಲ್ಲಿ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಸುಮಾರು 1 ಕೋಟಿ ಹಾಗೂ ಅವರು ಸಾಂಕ್ರಾಮಿಕ ಕಾಯಿಲೆಗೆ ಹೆಚ್ಚು ಗುರಿಯಾಗುತ್ತಾರೆ ಎಂದು ಪರಿಗಣಿಸಲಾಗಿದೆ.
ದೇಶದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಕುರಿತು ನಡೆಸಿರುವ ಪರಿಶೀಲನಾ ಸಭೆಯಲ್ಲಿ ಈ ವರ್ಗದವರಲ್ಲಿ ಮೊದಲ ಡೋಸ್ ಪಡೆದವರ ರಾಷ್ಟ್ರೀಯ ಸರಾಸರಿ ಶೇ. 82 ರಷ್ಟಿದ್ದರೆ, ಎರಡನೇ ಡೋಸ್ಗೆ ಇದು ಕೇವಲ 56ಶೇ. ಮಾತ್ರ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಒತ್ತಿ ಹೇಳಿದೆ.
ಆತಂಕಕಾರಿ ಸಂಗತಿಯೆಂದರೆ ಪಂಜಾಬ್, ಮಹಾರಾಷ್ಟ್ರ, ಹರಿಯಾಣ, ತಮಿಳುನಾಡು, ದಿಲ್ಲಿ ಹಾಗೂ ಅಸ್ಸಾಂ ಸೇರಿದಂತೆ 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಆರೋಗ್ಯ ಕಾರ್ಯಕರ್ತರಲ್ಲಿ ಸಂಪೂರ್ಣ ವ್ಯಾಕ್ಸಿನೇಷನ್ ವ್ಯಾಪ್ತಿಯು ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆಯಾಗಿದೆ.
ಈ ನಿರ್ಣಾಯಕ ವಿಭಾಗದಲ್ಲಿ ಕಡಿಮೆ ಪೂರ್ಣ ವ್ಯಾಕ್ಸಿನೇಷನ್ ಹೊರತಾಗಿಯೂ ದೇಶದ 2 ಕೋಟಿ ಮುಂಚೂಣಿ ಕಾರ್ಯಕರ್ತರ ಪೈಕಿ ಸುಮಾರು ಅರ್ಧದಷ್ಟು ಮಂದಿ ಲಸಿಕೆಯ ಎರಡು ಸಂಪೂರ್ಣ ಡೋಸ್ ಗಳನ್ನು ಸ್ವೀಕರಿಸಿದ್ದಾರೆ.
ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರೆಂಬ ಎರಡು ಆದ್ಯತೆಯ ಗುಂಪುಗಳಿಗೆ ಕಡಿಮೆ ಪ್ರಮಾಣದ ವ್ಯಾಕ್ಸಿನೇಷನ್ "ಗಂಭೀರ ಕಳವಳಕಾರಿ"ಯಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.