2019-20ರಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದ ಭಾರತೀಯ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜೂ.10: 2018-19ರಲ್ಲಿ ಶೇ.26.3ರಷ್ಟಿದ್ದ ಭಾರತದ ಒಟ್ಟು ದಾಖಲಾತಿ ಅನುಪಾತ (ಜಿಇಆರ್)ವು 2019-20ರಲ್ಲಿ ಶೇ.27.1ಕ್ಕೇರಿದೆ ಎಂದು ಇತ್ತೀಚಿನ ಉನ್ನತ ಶಿಕ್ಷಣ ಕುರಿತು ಅಖಿಲ ಭಾರತ ಸಮೀಕ್ಷೆಯು ತಿಳಿಸಿದೆ.
ಉನ್ನತ ಶಿಕ್ಷಣಕ್ಕಾಗಿ ಜಿಇಆರ್ 18ರಿಂದ 23 ವರ್ಷಗಳ ವಯೋಮಾನದ ಅರ್ಹ ಜನಸಂಖ್ಯೆಯ ಪೈಕಿ ಕಾಲೇಜುಗಳು ಮತ್ತು ವಿವಿಗಳಲ್ಲಿ ವ್ಯಾಸಂಗ ಮಾಡುತ್ತಿರುವವರ ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಷಾಂಕ್ ಅವರು ಗುರುವಾರ ಈ ವರದಿಯನ್ನು ಬಿಡುಗಡೆಗೊಳಿಸಿದರು. ವರದಿಯು ದೇಶದಲ್ಲಿ ಉನ್ನತ ಶಿಕ್ಷಣದ ಹಾಲಿ ಸ್ಥಿತಿಗತಿಯ ಕುರಿತು ಪ್ರಮುಖ ಸೂಚಕಗಳನ್ನು ಒದಗಿಸುತ್ತದೆ ಎಂದು ಶಿಕ್ಷಣ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
2019-20ನೇ ಸಾಲಿಗೆ ಮಹಿಳೆಯರ ಜಿಇಆರ್ ಶೇ.27.3 ರಷ್ಟಿದ್ದರೆ ಪುರುಷರ ಜಿಇಆರ್ ಶೇ.26.9ರಷ್ಟಿದೆ. ಇದರರ್ಥ ದೇಶದ ಕಾಲೇಜುಗಳು ಮತ್ತು ವಿವಿಗಳಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರು ವ್ಯಾಸಂಗ ಮಾಡುತ್ತಿದ್ದಾರೆ. 2019-20ನೇ ಸಾಲಿನ ಒಟ್ಟು ದಾಖಲಾತಿಗಳ ಪೈಕಿ ವಿದ್ಯಾರ್ಥಿನಿಯರ ಪಾಲು ಸುಮಾರು ಶೇ.49ರಷ್ಟಿತ್ತು.
ಜಿಇಆರ್ ಅನ್ನು ಹೆಚ್ಚಿಸುವುದು ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಸಿಪಿ)ಯ ಪ್ರಮುಖ ಗುರಿಗಳಲ್ಲೊಂದಾಗಿದೆ. ಎನ್ಇಪಿಯಲ್ಲಿ ತರಲಾಗಿರುವ ವಿವಿಧ ಸುಧಾರಣೆಗಳ ಮೂಲಕ 2035ರ ವೇಳೆಗೆ ಜಿಇಆರ್ನ್ನು ಶೇ.50ಕ್ಕೆ ಹೆಚ್ಚಿಸಲು ಕೇಂದ್ರವು ಬಯಸಿದೆ.
2018-19ರಲ್ಲಿ ಉನ್ನತ ಶಿಕ್ಷಣಕ್ಕೆ ಒಟ್ಟು ದಾಖಲಾತಿಗಳ ಸಂಖ್ಯೆ 3.74 ಕೋ.ಆಗಿದ್ದರೆ 2019-20ರಲ್ಲಿ ಅದು 3.85 ಕೋ.ಗೇರಿದೆ. ತನ್ಮೂಲಕ ಶೇ.3.04ರಷ್ಟು ಏರಿಕೆಯನ್ನು ದಾಖಲಿಸಿದೆ. 2014-15 ರಲ್ಲಿ ಒಟ್ಟು ದಾಖಲಾತಿಗಳ ಸಂಖ್ಯೆ 3.42 ಕೋ.ಆಗಿತ್ತು.
2018-19ರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳಿಗೆ ಜಿಇಆರ್ ಅನುಕ್ರಮವಾಗಿ ಶೇ.23 ಮತ್ತು ಶೇ.17.2 ಆಗಿದ್ದರೆ, 2019-20ರಲ್ಲಿ ಶೇ.23.4 ಮತ್ತು ಶೇ.18ಕ್ಕೆ ಏರಿಕೆಯಾಗಿವೆ.
ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಶೇಕಡಾವಾರು ಪ್ರಮಾಣದ ಹೋಲಿಕೆಯಾಗಿರುವ ಲಿಂಗ ಸಮಾನತೆ ಸೂಚಿ (ಜಿಪಿಐ) ಕೂಡ ಅಲ್ಪಪ್ರಮಾಣದಲ್ಲಿ ಏರಿಕೆಯಾಗಿದೆ.
2018-19ರಲ್ಲಿ ಶೇ.1ರಷ್ಟಿದ್ದ ಜಿಪಿಐ 2019-20ನೇ ಸಾಲಿಗೆ ಶೇ.1.1ಕ್ಕೆ ಹೆಚ್ಚಿದೆ. ಅಂದರೆ ದೇಶದಲ್ಲಿ ಪುರುಷರಿಗೆ ಹೋಲಿಸಿದರೆ ಹೆಚ್ಚು ಮಹಿಳೆಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. 2015-16ರಲ್ಲಿ ಜಿಪಿಐ ಶೇ.0.92ರಷ್ಟಿತ್ತು.
2015-16 ಮತ್ತು 2019-20ರ ನಡುವೆ ಉನ್ನತ ಶಿಕ್ಷಣಕ್ಕೆ ದಾಖಲಾತಿಯಲ್ಲಿ ಶೇ.11.4ರಷ್ಟು ಹೆಚ್ಚಳವಾಗಿದೆ ಮತ್ತು ಈ ಅವಧಿಯಲ್ಲಿ ವಿದ್ಯಾರ್ಥಿನಿಯರ ದಾಖಲಾತಿ ಪ್ರಮಾಣದಲ್ಲಿ ಶೇ.18.2ರಷ್ಟು ಏರಿಕೆಯಾಗಿದೆ ಎಂದು ಪೋಖ್ರಿಯಾಲ್ ವರದಿ ಬಿಡುಗಡೆ ಸಂದರ್ಭದಲ್ಲಿ ತಿಳಿಸಿದರು.