ಕೋವಿಡ್ ನಿರ್ವಹಣೆ ಅಗತ್ಯಗಳು, ಬ್ಲಾಕ್ ಫಂಗಸ್ ಔಷಧಿಗಳ ತೆರಿಗೆಯಲ್ಲಿ ಕಡಿತದ ಕುರಿತು ನಿರ್ಧಾರ
ಶನಿವಾರ ಜಿಎಸ್ಟಿ ಮಂಡಳಿಯ ಸಭೆ
ಹೊಸದಿಲ್ಲಿ,ಜೂ.10: ಕೋವಿಡ್ ನಿರ್ವಹಣೆಗೆ ಅಗತ್ಯ ವಸ್ತುಗಳು ಮತ್ತು ಬ್ಲಾಕ್ ಫಂಗಸ್ ಗೆ ಔಷಧಿಗಳ ಮೇಲಿನ ತೆರಿಗೆಗಳನ್ನು ತಗ್ಗಿಸುವ ಬಗ್ಗೆ ನಿರ್ಧರಿಸಲು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯ ಜಿಎಸ್ಟಿ ಮಂಡಳಿಯು ಶನಿವಾರ ಇಲ್ಲಿ ಸಭೆ ಸೇರಲಿದೆ.
ಮೇ 28ರಂದು ನಡೆದಿದ್ದ ಜಿಎಸ್ಟಿ ಮಂಡಳಿಯ ಹಿಂದಿನ ಸಭೆಯಲ್ಲಿ ಪಿಪಿಇ ಕಿಟ್ ಗಳು, ಮಾಸ್ಕ್ ಗಳು ಮತ್ತು ಲಸಿಕೆಗಳು ಸೇರಿದಂತೆ ಕೋವಿಡ್ ನಿರ್ವಹಣೆಗೆ ಅಗತ್ಯ ವಸ್ತುಗಳ ಮೇಲಿನ ತೆರಿಗೆ ಕಡಿತದ ಬಗ್ಗೆ ಸಲಹೆಗಳನ್ನು ನೀಡಲು ಸಚಿವರ ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿಯು ಜೂ.7ರಂದು ತನ್ನ ವರದಿಯನ್ನು ಸಲ್ಲಿಸಿದೆ. ಸಮಿತಿಯಲ್ಲಿದ್ದ ಕೆಲವು ರಾಜ್ಯಗಳ ಹಣಕಾಸು ಸಚಿವರು ಕೋವಿಡ್ ಅಗತ್ಯಗಳ ಮೇಲಿನ ತೆರಿಗೆ ಕಡಿತಕ್ಕೆ ಒತ್ತು ನೀಡಿದ್ದಾರೆ ಎನ್ನಲಾಗಿದೆ.
ವೈದ್ಯಕೀಯ ದರ್ಜೆಯ ಆಮ್ಲಜನಕ, ಪಲ್ಸ್ ಆಕ್ಸಿಮೀಟರ್ಗಳು, ಹ್ಯಾಂಡ್ ಸ್ಯಾನಿಟೈಸರ್ಗಳು, ಸಾಂದ್ರಕಗಳಂತಹ ಆಮ್ಲಜನಕ ಚಿಕಿತ್ಸಾ ಉಪಕರಣಗಳು, ವೆಂಟಿಲೇಟರ್ಗಳು, ಪಿಪಿಇ ಕಿಟ್ ಗಳು, ಎನ್-95 ಮತ್ತು ಸರ್ಜಿಕಲ್ ಮಾಸ್ಕ್ ಗಳು ಹಾಗೂ ಉಷ್ಣತಾ ಮಾಪಕಗಳ ಮೇಲಿನ ಜಿಎಸ್ಟಿಯನ್ನು ಕಡಿತಗೊಳಿಸಬೇಕೇ ಅಥವಾ ವಿನಾಯಿತಿ ನೀಡಬೇಕೇ ಎನ್ನುವುದನ್ನು ಪರಿಶೀಲಿಸುವಂತೆ ಸಮಿತಿಗೆ ಸೂಚಿಸಲಾಗಿತ್ತು. ಇವುಗಳ ಜೊತೆಗೆ ಸಮಿತಿಯು ಕೋವಿಡ್ ಲಸಿಕೆಗಳು, ಔಷಧಿಗಳು ಮತ್ತು ಕೋವಿಡ್ ಪತ್ತೆಗೆ ಪರೀಕ್ಷಾ ಕಿಟ್ ಗಳ ಮೇಲಿನ ತೆರಿಗೆಗಳ ಬಗ್ಗೆಯೂ ಪರಿಶೀಲನೆ ನಡೆಸಿದೆ.
ಮೇ 28ರ ಜಿಎಸ್ಟಿ ಮಂಡಳಿ ಸಭೆಯಲ್ಲಿ ಕೋವಿಡ್ ಲಸಿಕೆಗಳು ಮತ್ತು ವೈದ್ಯಕೀಯ ಪೂರೈಕೆಗಳ ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿರದಿದ್ದರೂ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಆ್ಯಂಫೊಟೆರಿಸಿನ್ ಬಿ ಔಷಧಿಯ ಆಮದಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿತ್ತು.