ವಿದ್ಯುತ್ ದರ ಏರಿಕೆ ತಡೆ ಹಿಡಿಯಲು ಸಿಪಿಐಎಂ ಆಗ್ರಹ
ಉಡುಪಿ, ಜೂ.10: ಕೋವಿಡ್ ಆರ್ಥಿಕ ಸಂಕಷ್ಟದ ನಡುವೆ ವಿದ್ಯುತ್ ದರ ಹೆಚ್ಚಳಕ್ಕೆ ಅನುಮತಿ ನೀಡಿರುವ ಕ.ವಿ.ನ.ಆಯೋಗ(ಕೆಇಆರ್‌ಸಿ)ದ ಆಜ್ಞೆಯನ್ನು ತಡೆ ಹಿಡಿಯಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ರಾಜ್ಯ ಸರಕಾರ ವನ್ನು ಒತ್ತಾಯಿಸಿದೆ.
ಕೋವಿಡ್ ಸಾಂಕ್ರಾಮಿಕ ರೋಗ ಮತ್ತು ಲಾಕ್‌ಡೌನ್ ಪರಿಣಾಮದಿಂದ ಜನ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಲವರು ಉದ್ಯೋಗ ಕಳಕೊಂಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಮೇ ತಿಂಗಳಲ್ಲಿ 16 ಬಾರಿ ಹೆಚ್ಚಿಸಿದ್ದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ರೂ. ನೂರರ ಗಡಿ ದಾಟಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆ ಜನರಿಗೆ ಮಾಡುವ ದ್ರೋಹವಾಗುತ್ತದೆ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಆಯೋಗದ ಆಜ್ಞೆಯನ್ನು ತಡೆ ಹಿಡಿಯಬೇಕು ಹಾಗೂ ಎಸ್ಕಾಂಗಳಿಗೆ ಸರಕಾರವೇ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಸೇರಿ ಮುಂದಿನ ವಾರದಿಂದ ಪ್ರತಿಭಟನೆ ರೂಪಿಸಲಾಗುವುದು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.





