ಸರಕಾರಿ ತಾಯಿ ಮಕ್ಕಳ ಆಸ್ಪತ್ರೆ ಹಡಿಲು ಬೀಳದಂತೆ ಶಾಸಕರು ಕ್ರಮವಹಿಸಲಿ: ಪ್ರಮೋದ್ ಮಧ್ವರಾಜ್

ಉಡುಪಿ, ಜೂ.10: ಉಡುಪಿಯ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಾಸಕ ರಘುಪತಿ ಭಟ್ ಅವರಿಂದ ಪ್ರಾರಂಭವಾದ ಈ ಸಮಸ್ಯೆ ಯನ್ನು ಅವರೇ ಪರಿಹರಿಸಲಿ. ಈ ಆಸ್ಪತ್ರೆ ಹಡಿಲು ಬೀಳದಂತೆ ರಕ್ಷಿಸಿ ಜನರಿಗೆ ಈ ಹಿಂದಿನಂತೆಯೆ ಆರೋಗ್ಯ ಸೇವೆ ಮತ್ತು ಅಲ್ಲಿಯ ನೌಕರರಿಗೆ ವೇತನ ಸಹಿತ ಸೇವಾ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಗ್ರಹಿಸಿದರು.
ಹಿಂದಿನ ಸರಕಾರದೊಂದಿಗೆ ಮಾಡಿಕೊಂಡಿರುವ ಕಾನೂನಾತ್ಮಕ ಒಪ್ಪಂದದಂತೆ 400 ಬೆಡ್‌ಗಳ ಮತ್ತು ತಾಯಿ ಮತ್ತು ಮಕ್ಕಳ ಈ ಎರಡೂ ಆಸ್ಪತ್ರೆಗಳ ಈ ಯೋಜನೆಯನ್ನು ಬಿ.ಆರ್.ಶೆಟ್ಟಿ ಸ್ವಂತ ಲಾಭಕ್ಕಾಗಿ ಮಾಡದೆ 400 ಬೆಡ್ಗಳ ಸುಸಜ್ಜಿತ ಆಸ್ಪತ್ರೆಯಿಂದ ಬಂದ ಲಾಭಾಂಶವನ್ನು ಸಂಪೂರ್ಣವಾಗಿ ಎರಡೂ ಅಸ್ಪತ್ರೆಗಳ ನಿರ್ವಹಣೆ ಮತ್ತು ಅಭಿವೃದ್ದಿಗಾಗಿ ಬಳಸಿಕೊಳ್ಳುವುದಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಸರಕಾರ ಬದಲಾದ ಮೇಲೆ ಶಾಸಕ ರಘುಪತಿ ಭಟ್ 400 ಬೆಡ್ಗಳ ಆಸ್ಪತ್ರೆಯನ್ನು ಕಟ್ಟಿಸಲು ವಿರೋಧ ತೋರಿದರು. ಇದರಿಂದ ವ್ಯವಸ್ಥಿತವಾಗಿ ನಡೆಯುತ್ತಿದ್ದ ಸುಸಜ್ಜಿತ ಆಸ್ಪತ್ರೆ ಇಂದು ಅವ್ಯವಸ್ಥೆಯತ್ತ ಮುಖ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.
ಬಹುಷ 400 ಬೆಡ್‌ಗಳ ಆಸ್ಪತ್ರೆ ನಿರ್ಮಾಣವಾಗಿರುತ್ತಿದ್ದಲ್ಲಿ 200 ಬೆಡ್‌ಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಯನ್ನು ಅವರೇ ನೋಡಿಕೊಳ್ಳುತ್ತಿದ್ದರು. ಇದೀಗ ರಘುಪತಿ ಭಟ್ ವಿರೋಧದಿಂದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗೊಂದಲಗಳುಂಟಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ ಗಳಿಗೆ ಮತ್ತು ಇತರ ನೌಕರರಿಗೆ ಹಲವು ತಿಂಗಳಿನಿಂದ ವೇತನವಿಲ್ಲದೆ ಇತ್ತ ಸೇವಾ ಭದ್ರತೆಯೂ ಇಲ್ಲದೆ ಮಾನಸಿಕವಾಗಿ ಕಿರುಕುಳ ಅನುಭವಿಸಿ ಮುಷ್ಕರದ ಕಾರಣದಿಂದಾಗಿ ಸೂಕ್ತ ಚಿಕಿತ್ಸೆ ಸಿಗದೆ ಜನರು ಪರದಾಡುವಂತಾಗಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.







