ಚಿಕ್ಕಮಗಳೂರು: ಕೊರೋನ ಸೋಂಕಿನಿಂದ ಬಳಲುತ್ತಿದ್ದ ದಂಪತಿಗೆ ಪಾರ್ಶ್ವವಾಯು
ಚಿಕಿತ್ಸೆಗೆ ಹಣವಿಲ್ಲದೆ ಪತಿ, ಪತ್ನಿ ಪರದಾಟ; ನೆರವಿಗೆ ಗ್ರಾಮಸ್ಥರ ಮನವಿ

ಚಿಕ್ಕಮಗಳೂರು, ಜೂ.10: ಕೊರೋನ ಸೋಂಕಿಗೆ ತುತ್ತಾಗಿದ್ದ ದಂಪತಿ ಇನ್ನೇನು ಸೋಂಕಿನಿಂದ ಗುಣಮುಖರಾದರು ಎನ್ನುವಷ್ಟರಲ್ಲಿ ಪತಿ ಪತ್ನಿ ಇಬ್ಬರೂ ಪಾರ್ಶ್ವವಾಯು ಪೀಡಿತರಾಗಿದ್ದು, ಸದ್ಯ ಈ ದಂಪತಿ ಸಂಕಷ್ಟ ಅನುಭವಿಸುತ್ತಿರುವ ಘಟನೆಯೊಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದ ಶಿವಣ್ಣ ಹಾಗೂ ಸುಮಾ ದಂಪತಿ ಇಬ್ಬರೂ ಇತ್ತೀಚೆಗೆ ಕೊರೋನ ಸೋಂಕಿಗೆ ತುತ್ತಾಗಿದ್ದರು. ಸೋಂಕಿಗೆ ತುತ್ತಾಗಿದ್ದ ದಂಪತಿ ತಮ್ಮ ಮನೆಯಲ್ಲೇ ಹೋಮ್ ಐಸೋಲೇಶನ್‍ನಲ್ಲಿದ್ದು, ಮನೆಯಲ್ಲೇ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯಿಂದ ನಿಧಾನವಾಗಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತು. ಇನ್ನೇನು ಕೊರೋನ ಸೋಂಕಿನಿಂದ ಸಂಪೂರ್ಣ ಗುಣಮುಖರಾದೆವು ಎಂದು ದಂಪತಿ ಸಂತಸಗೊಂಡಿದ್ದ ವೇಳೆಯೇ ದಂಪತಿಗೆ ಸ್ಟ್ರೋಕ್ ಶಾಕ್ ನೀಡಿದೆ.
ದಂಪತಿ ಪೈಕಿ ಶಿವಣ್ಣ ಅವರಿಗೆ ಎಡಗೈ ಹಾಗೂ ಎಡ ಕಾಲಿಗೆ ಪಾರ್ಶ್ವವಾಯು ಬಡಿದಿದ್ದು, ಶಿವಣ್ಣ ಪತ್ನಿ ಸುಮಾ ಅವರು ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಶಿವಣ್ಣ ಆಟೊ ಚಾಲಕನಾಗಿದ್ದು, ಪತ್ನಿ ಸುಮಾ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಆದರೆ ಕೊರೋನ ಸೋಂಕಿಗೆ ತುತ್ತಾದ ಬಳಿಕ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ದಂಪತಿಗೆ ಪಾರ್ಶ್ವವಾಯು ಆಗಿರುವುದರಿಂದ ದಂಪತಿ ಎದ್ದು ಓಡಾಡದಂತಾಗಿದೆ.
ಉದ್ಯೋಗವಿಲ್ಲದೇ ಹಣವೂ ಇಲ್ಲದ ಪರಿಣಾಮ ಅಕಾಲಿಕವಾಗಿ ಎದುರಾಗಿರುವ ರೋಗಕ್ಕೆ ಚಿಕಿತ್ಸೆ ಪಡೆಯಲು ದಂಪತಿಗೆ ಸಾಧ್ಯವಾಗುತ್ತಿಲ್ಲ. ದಂಪತಿ ಅತ್ತಿಗೆರೆಯ ತಮ್ಮ ಮನೆಯಲ್ಲಿ ಮಲಗಿದಲ್ಲೇ ಇದ್ದು, ಕೊರೋನ ಸೋಂಕಿನ ಭೀತಿಯಿಂದ ಕುಟುಂಬಸ್ಥರೂ ಹತ್ತಿರ ಬರುತ್ತಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿ ಈ ದಂಪತಿ ಮನೆಗೆ ಭೇಟಿ ನೀಡುತ್ತಾ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಸಂಘ ಸಂಸ್ಥೆಗಳು ದಂಪತಿಗೆ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿರುವುದರಿಂದ ಬಡ ಜೀವಗಳು ಇನ್ನೂ ಬದುಕಿದ್ದು, ಈ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ, ಜನಪ್ರನಿಧಿಗಳು ಮುಂದಾಗಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.







