ಮಕ್ಕಳ ಅಶ್ಲೀಲ ವೀಡಿಯೋ ರವಾನೆ ಆರೋಪ: ಪ್ರಕರಣ ದಾಖಲು
ಮಂಗಳೂರು, ಜೂ.10: ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಕೇಂದ್ರ ಸರಕಾರವು ಕಾಣೆಯಾದ ಮತ್ತು ಶೋಷಿತ ಮಕ್ಕಳ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ಆಯಾ ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಗಳ ಮೂಲಕ ತನಿಖೆಗೆ ಆದೇಶಿಸಿದೆ.
ಅದರಂತೆ ಸೈಬರ್ ಟಿಪ್ ಲೈನ್ ರಿಪೋರ್ಟ್ ಸಿಡಿಯನ್ನು ಎನ್‌ಸಿಆರ್‌ಬಿುಂದ ಬೆಂಗಳೂರು ಸಿಐಡಿಯವರು ಅಂಚೆ ಮೂಲಕ ಪಡೆದು ಟಿಪ್‌ಲೈನ್‌ನಲ್ಲಿ ನೋಂದಣಿಯಾದ ದೂರುಗಳನ್ನು ಪರಿಶೀಲಿಸಿ ವಿಚಾರಣೆ ಕೈಗೊಂಡು ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದೆ. ಅದರಂತೆ 2020 ಜೂ.25ರಂದು ಮಗುವಿನ ಅಶ್ಲೀಲ ವೀಡಿಯೋವನ್ನು ಪ್ರಜ್ವಲ್ ಕೋಟ್ಯಾನ್ ಎಂಬಾತ ಡೌನ್‌ಲೋಡ್ ಮಾಡಿ ಕುಲಾಲ್ ಎಂಬಾತನಿಗೆ ಇನ್‌ಸ್ಟ್ರಾಗ್ರಾಮ್‌ನಲ್ಲಿ ಚಾಟ್ ಮಾಡಿರುವ ಮತ್ತು ಅಪ್‌ಲೋಡ್ ಮಾಡಿರುವ ಬಗ್ಗೆ ತನಿಖೆಯಲ್ಲಿ ಮಾಹಿತಿ ಬಹಿರಂಗಗೊಂಡಿದೆ. ಸಿಡಿಯಲ್ಲಿರುವ ಮಾಹಿತಿಯನ್ನು ದೃಢಪಡಿಸಿಕೊಂಡು ಆರೋಪಿ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದು ಸಿಡಿಯನ್ನು ಪರಿಶೀಲಿಸಿದಾಗ 2020 ಮೇ 17ರಂದು ಮಗುವಿನ ಅಶ್ಲೀಲತೆಯ ವೀಡಿಯೋವನ್ನು ನಾಗೇಶ್ ಸುವರ್ಣ ಎಂಬವರಿಗೆ ಫೇಸ್‌ಬುಕ್ ಮೆಸೆಂಜರಿನಲ್ಲಿ ಚಾಟ್ ಮಾಡಿರುವ ಹಾಗೂ ಅಪ್‌ಲೋಡ್ ಮಾಡಿರುವ ಮಾಹಿತಿ ಲಭಿಸಿದೆ. ಈ ಬಗ್ಗೆಯೂ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
2020 ಜೂ.24ರಂದು ಇನ್ನೊಂದು ಮಗುವಿನ ಅಶ್ಲೀಲತೆಯ ವೀಡಿಯೋವನ್ನು ಪ್ರಶಾಂತ್ ಪಚ್ಚು ಎಂಬಾತ ಡೌನ್‌ಲೋಡ್ ಮಾಡಿ ದೇಕಾ ನಾಯರ್ ಎಂಬವರಿಗೆ ಫೇಸ್‌ಬುಕ್ ಮೆಸೆಂಜರಿನಲ್ಲಿ ಚಾಟ್ ಮಾಡಿರುವ ಹಾಗೂ ಅಪ್‌ಲೋಡ್ ಮಾಡಿರುವ ಮಾಹಿತಿ ಲಭಿಸಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.







