ಭೂಅಕ್ರಮದ ತನಿಖೆಗೆ ರೋಹಿಣಿ ಸಿಂಧೂರಿಯನ್ನು ನೇಮಿಸಿದರೆ ನಮ್ಮ ಅಭ್ಯಂತರವಿಲ್ಲ: ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಜೂ.10: ಮೈಸೂರಿನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭೂ ಅಕ್ರಮಗಳ ತನಿಖೆಗೆ ವಿಶೇಷಾಧಿಕಾರಿಯನ್ನಾಗಿ ರೋಹಿಣಿ ಸಿಂಧೂರಿ ಅವರನ್ನು ನೇಮಿಸಿದರೆ ನಮ್ಮ ಅಭ್ಯಂತರ ಏನೂ ಇಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಅವರನ್ನು ಯಾರದೋ ಒತ್ತಡದಿಂದ ಇಲ್ಲಿಂದ ವರ್ಗಾವಣೆ ಮಾಡಿಲ್ಲ. ಮೈಸೂರಿನಲ್ಲಿ ನಡೆದ ವಿದ್ಯಮಾನಗಳ ಕುರಿತು ಮುಖ್ಯ ಕಾರ್ಯದರ್ಶಿಗಳು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ ಆಧಾರದ ಮೇಲೆ ವರ್ಗಾವಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ನಮ್ಮ ಪಕ್ಷದ ಹಿರಿಯ ಮುಖಂಡರು, ಅವರು ಭೂ ಅಕ್ರಮದ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಕೊಟ್ಟರೆ ಸ್ವೀಕರಿಸಲಿದ್ದೇವೆ. ನಿರ್ಗಮಿತ ಜಿಲ್ಲಾಧಿಕಾರಿ ಭೂ ಅಕ್ರಮಗಳ ಬಗ್ಗೆ ಆದೇಶ ಮಾಡಿದ್ದರೆ ನೂತನ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ರೈತರು ಬೆಳೆದಿರುವ ರಾಗಿಗೆ ನೀಡಲಿರುವ ಬೆಂಬಲ ಬೆಲೆಗೆ 250 ಕೋಟಿ ರೂ. ಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಅತೀ ಹೆಚ್ಚು ರಾಗಿಯನ್ನು ಬೆಳೆಯಲಾಗಿದೆ. ಶೀಘ್ರದಲ್ಲಿಯೇ ಹಂತ ಹಂತವಾಗಿ ರೈತರು ನೀಡಿರುವ ರಾಗಿಗೆ ಬೆಂಬಲ ಬೆಲೆ ನೀಡಲಾಗುವುದು.
-ಎಸ್.ಟಿ.ಸೋಮಶೇಖರ್, ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ







