ಎರಡನೇ ಅಲೆಯಲ್ಲಿ ಎರಡು ಲಕ್ಷ ದಾಟಿದ ಕೋವಿಡ್ ಸಾವು

ಹೊಸದಿಲ್ಲಿ, ಜೂ.11: ಭಾರತದಲ್ಲಿ ವಿನಾಶಕಾರಿಯಾಗಿ ಪರಿಣಮಿಸಿದ ಕೋರೋನ ವೈರಸ್‌ನ ಎರಡನೇ ಅಲೆ ಕಳೆದ ಮಾರ್ಚ್‌ನಿಂದೀಚೆಗೆ 2 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. 2020ರ ಆರಂಭದಲ್ಲಿ ದೇಶದಲ್ಲಿ ಪತ್ತೆಯಾದ ಈ ಸಾಂಕ್ರಾಮಿಕದಿಂದ ಮೃತಪಟ್ಟ ಪ್ರತಿ ಐದು ಮಂದಿಯ ಪೈಕಿ ಮೂವರು ಎರಡನೇ ಅಲೆ ವೇಳೆ ಕೊನೆಯುಸಿರೆಳೆದಿದ್ದಾರೆ.
ಕಳೆದ ಮಾರ್ಚ್ 1ರಿಂದೀಚೆಗೆ ಭಾರತದಲ್ಲಿ 2.05 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದು, ಸರಾಸರಿ ದಿನಕ್ಕೆ 2,000ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. ದೇಶದಲ್ಲಿ ಈ ಮಹಾಮಾರಿಗೆ ಬಲಿಯಾದ ಒಟ್ಟು ಸೋಂಕಿತರ ಪೈಕಿ ಶೇಕಡ 57ರಷ್ಟು ಮಂದಿ ಎರಡನೇ ಅಲೆಯಲ್ಲಿ ಜೀವ ಕಳೆದುಕೊಂಡವರು. ಇದುವರೆಗೆ ದೇಶದಲ್ಲಿ 3,63,029 ಮಂದಿ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕಳೆದ 102 ದಿನಗಳ ಅವಧಿಯಲ್ಲಿ ಬ್ರೆಝಿಲ್‌ನಲ್ಲಿ ಅತ್ಯಧಿಕ ಎಂದರೆ 2.25 ಲಕ್ಷ ಸಾವು ಸಂಭವಿಸಿದೆ. ಒಟ್ಟು 6.1 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿರುವ ಅಮೆರಿಕದಲ್ಲಿ ಮಾರ್ಚ್ 1ರಿಂದೀಚೆಗೆ ಬಲಿಯಾದವರ ಸಂಖ್ಯೆ 82,738. ಕಳೆದ ಮೂರು ವಾರಗಳಿಂದ ಭಾರತದಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದೆ.
ಒಟ್ಟು ಪ್ರಕರಣಗಳ ಪೈಕಿ ಶೇಕಡ 62ರಷ್ಟು ಪ್ರಕರಣಗಳು ಎರಡನೇ ಅಲೆಯ ವೇಳೆ ವರದಿಯಾಗಿವೆ. ಮಾರ್ಚ್ 1ರಿಂದೀಚೆಗೆ ದೇಶದಲ್ಲಿ 1.8 ಕೋಟಿ ಹೊಸ ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 2.9 ಕೋಟಿ.
ಮಾರ್ಚ್ 1ರ ಬಳಿಕ ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯ ಪ್ರಕರಣಗಳನ್ನು ಭಾರತ ದಾಖಲಿಸಿದ್ದು, ಅಮೆರಿಕದಲ್ಲಿ 48.7 ಲಕ್ಷ ಹಾಗೂ ಬ್ರೆಝಿಲ್‌ನಲ್ಲಿ 65.7 ಲಕ್ಷ ಪ್ರಕರಣಗಳು ವರದಿಯಾಗಿವೆ. ಗುರುವಾರ ದೇಶದಲ್ಲಿ 91,870 ಪ್ರಕರಣಗಳು ವರದಿಯಾಗಿದ್ದು, 1,891 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.