ಕ್ರೆಡಿಟ್ ಕಾರ್ಡ್ ವಂಚನೆಗೆ ಬಲಿಯಾಗಿ ಹಣ ಕಳೆದುಕೊಂಡ ಬಿಜೆಪಿ ರಾಜ್ಯಸಭಾ ಸದಸ್ಯ

photo: facebook
ರಾಯ್ಪುರ: ಬಿಜೆಪಿ ಪಕ್ಷದ ರಾಜ್ಯಸಭಾ ಸದಸ್ಯ ಹಾಗೂ ಛತ್ತೀಸ್ ಗಡದ ಮಾಜಿ ಸಚಿವ ರಾಮ್ ವಿಚಾರ್ ನೇತಾಮ್ ಕ್ರೆಡಿಟ್ ಕಾರ್ಡ್ ವಂಚನೆಗೆ ಸಿಲುಕಿ 37,000 ರೂ. ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಕ್ರೆಡಿಟ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಹಣ ಎಗರಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸಂಸದ ರಾಮ್ ವಿಚಾರ್ ರ ಸಂಬಂಧಿ ರಾಯ್ಪುರದ ತೆಲಿಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಂಸದ ರಾಮ್ವಿಚಾರ್ ನೇತಮ್ ಅವರ ಹೆಸರಿನಲ್ಲಿ ನೀಡಲಾದ ಎಸ್ಬಿಐ ಕ್ರೆಡಿಟ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಅಪರಿಚಿತ ವ್ಯಕ್ತಿಯೋರ್ವ 508.92 ಡಾಲರ್, ಭಾರತೀಯ ಕರೆನ್ಸಿಯಲ್ಲಿ ಸುಮಾರು 36,844 ರೂ.ಯನ್ನು ಎಗರಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕ್ರೆಡಿಟ್ ಕಾರ್ಡ್ ಅನ್ನು ಈ ಹಿಂದೆ ನೇತಾಮ್ ಹೊಂದಿದ್ದು, ಆದರೆ ೨೦೨೦ರಲ್ಲಿ ಅದರ ವ್ಯಾಲಿಡಿಟಿ ಮುಗಿದಿತ್ತು ಎನ್ನಲಾಗಿದೆ. ಬಳಿಕ ಇದುವರೆಗೂ ಆ ಕ್ರೆಡಿಟ್ ಕಾರ್ಡನ್ನು ಅವರು ಬಳಸಿರಲಿಲ್ಲ ಎನ್ನಲಾಗಿದೆ. ಆದರೆ ಅವರಿಗೆ ತಿಳಿಯದಂತೆ ಅಪರಿಚಿತ ವ್ಯಕ್ತಿಯೋರ್ವ ಈ ಕಾರ್ಡ್ ಬಳಸಿ ವಹಿವಾಟು ನಡೆಸಿದ್ದು, ಬ್ಯಾಂಕ್ ಸಿಬ್ಬಂದಿಯು ಹಣ ಪಾವತಿಸಬೇಕೆಂದು ಕರೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.