ವಿಶ್ವದ ಅತೀ ದುಬಾರಿ 16 ಕೋಟಿ ರೂ.ಯ ಔಷಧಿಯನ್ನು ತಮ್ಮ ಮಗುವಿಗಾಗಿ ತರಿಸಿದ ಹೈದರಾಬಾದ್ ನ ದಂಪತಿ

photo: indian express
ಹೈದರಾಬಾದ್: ಅತ್ಯಂತ ಅಪರೂಪದ ಆರೋಗ್ಯ ಸಮಸ್ಯೆಯಾಗಿರುವ ಸ್ಪೈನ್ ಮಸ್ಕ್ಯುಲರ್ ಎಟ್ರೊಫಿಯಿಂದ ಬಳಲುತ್ತಿರುವ ಹೈದರಾಬಾದ್ನ ಮೂರು ವರ್ಷದ ಆಯಾಂಶ್ ಎಂಬ ಪುಟ್ಟ ಬಾಲಕನಿಗೆ ಜಗತ್ತಿನ ಅತ್ಯಂತ ದುಬಾರಿ ಔಷಧಿ ಝೊಲ್ಗೆನ್ಸ್ಮ ನೀಡಲಾಗಿದೆ. ಈ ಔಷಧಿ ಖರೀದಿಗಾಗಿ ಆತನ ಹೆತ್ತವರು ಮೂರೂವರೆ ತಿಂಗಳು ಅವಧಿಯಲ್ಲಿ 65,000 ದಾನಿಗಳಿಂದ ರೂ 16 ಕೋಟಿ ಸಂಗ್ರಹಿಸಲು ಸಫಲರಾಗಿದ್ದಾರೆ.
ಅಮೆರಿಕಾದ ನೊವಾರ್ಟಿಸ್ ಫಾರ್ಮಾ ಕಂಪೆನಿಯಿಂದ ಆಮದು ಮಾಡಲಾಗಿರುವ ಈ ಔಷಧಿ ಜೂನ್ 8ರಂದು ಹೈದರಾಬಾದ್ ತಲುಪಿತ್ತು. ಈ ಔಷಧಿ ಮೇಲಿನ ರೂ 6 ಕೋಟಿಯಷ್ಟು ಜಿಎಸ್ಟಿ ಹಾಗೂ ಆಮದು ಸುಂಕ ಪಾವತಿಗೆ ಕೇಂದ್ರ ಸರಕಾರ ವಿನಾಯಿತಿ ನೀಡಿತ್ತು.
ಮೂಲತಃ ಛತ್ತೀಸಗಢದವರಾಗಿರುವ ಹಾಗೂ ಹೈದರಾಬಾದ್ನ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಆಯಾಂಶ್ ತಂದೆ ಯೊಗೇಶ್ ಗುಪ್ತ ಹಾಗೂ ತಾಯಿ ರೂಪಲ್ ಗುಪ್ತ ತಮ್ಮ ಸಾಮಾಜಿಕ ಜಾಲತಾಣ ಪುಟಗಳಲ್ಲಿ ಫೆಬ್ರವರಿ 4ರಂದು ತಮ್ಮ ಮಗನಿಗಾಗಿ ಹಣಕಾಸಿನ ಸಹಾಯ ಕೋರಿದ್ದರು. ಮೇ 23ರೊಳಗಾಗಿ ಅವರಿಗೆ ರೂ 16 ಕೋಟಿ ಹರಿದು ಬಂದಿತ್ತು. ಕ್ರಿಕೆಟಿಗ ವಿರಾಟ್ ಕೊಹ್ಲಿ, ಅವರ ಪತ್ನಿ ಅನುಷ್ಕಾ ಶರ್ಮ, ನಟರಾದ ಇಮ್ರಾನ್ ಹಶ್ಮಿ, ಜಾವೇದ್ ಜಾಫ್ರಿ, ರಾಜಕುಮಾರ್ ರಾವ್, ಅರ್ಜುನ್ ಕಪೂರ್, ನಟಿಯರಾದ ಸಾರಾ ಆಲಿ ಖಾನ್, ದಿಯಾ ಮಿರ್ಝಾ ಕೂಡ ದೇಣಿಗೆ ನಿಡಿದ್ದರು.
ಔಷಧಿಯನ್ನು ಮಗುವಿಗೆ ಬುಧವಾರ ಬೆಳಿಗ್ಗೆ ಸೆಕುಂದರಾಬಾದ್ ನ ವಿಕ್ರಂಪುರಿಯಲ್ಲಿರುವ ರೇನ್ ಬೋ ಮಕ್ಕಳ ಆಸ್ಪತ್ರೆಯಲ್ಲಿ ನೀಡಲಾಯಿತು. ಸಂಜೆ ತನಕ ವೈದ್ಯರ ನಿಗಾದಲ್ಲಿದ್ದ ಮಗುವನ್ನು ನಂತರ ಡಿಸ್ಜಾರ್ಜ್ ಮಾಡಲಾಗಿದೆ. ಈ ಔಷಧಿ ನೀಡಿದ ನಂತರ ಬರುವ ಜ್ವರ ಹೊರತಾಗಿ ಮಗುವಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಯೋಗೇಶ್ ಹೇಳಿದ್ದಾರೆ.
ಮಗುವನ್ನು ಎರಡು ತಿಂಗಳು ಅತ್ಯಂತ ಜತನದಿಂದ ನೋಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಆತ ಬಹಳಷ್ಟು ದುರ್ಬಲನಾಗಿರುವುದರಿಂದ ಮತ್ತೆ ಬೇರೆ ಯಾವುದಾದರೂ ಸೋಂಕು ತಗಲುವ ಸಾಧ್ಯತೆಯೂ ಇರುವುದರಿಂದ ಆತನನ್ನು ಕ್ವಾರಂಟೈನ್ನಲ್ಲಿರಿಸಲು ವೈದ್ಯರು ಸಲಹೆ ನೀಡಿದ್ದಾರೆ.