ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂಜರಿಕೆ ತೋರುವುದು ಜಾಗತಿಕ ವಿದ್ಯಾಮಾನ: ಕೇಂದ್ರ ಸರಕಾರ

ಹೊಸದಿಲ್ಲಿ, ಜೂ. 11: ಲಸಿಕೆ ತೆಗೆದುಕೊಳ್ಳಲು ಹಿಂಜರಿಯುವುದು ಜಾಗತಿಕವಾಗಿ ಅಂಗೀಕರಿಸಲಾದ ವಿದ್ಯಾಮಾನ. ಈ ಸಮಸ್ಯೆ ಸಮುದಾಯ ಮಟ್ಟದಲ್ಲಿ ವೈಜ್ಞಾನಿಕ ರೀತಿಯಲ್ಲಿ ಪರಿಹರಿಸಬೇಕು ಎಂದು ಕೇಂದ್ರ ಸರಕಾರದ ‘ಬಸ್ಟಿಂಗ್ ಮಿಥ್ಸ್ ಆಫ್ ಇಮ್ಯುನೈಝೇಶನ್’ ಪುಸ್ತಕ ಪ್ರತಿಪಾದಿಸಿದೆ.
ಕೋವಿಡ್-19 ಲಸಿಕೆ ಅಭಿಯಾನದ ಆರಂಭದಲ್ಲಿ ‘‘ಕೋವಿಡ್-19 ಲಸಿಕಾಕರಣದ ಸಂವಹನ ಕಾರ್ಯತಂತ್ರ’’ವನ್ನು ಎಲ್ಲಾ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಲಸಿಕೆಯ ಸುರಕ್ಷತೆಯ ಕುರಿತು ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ದೇಶದ ಗ್ರಾಮೀಣ ಹಾಗೂ ಬುಡಕಟ್ಟ ಜನರು ಪ್ರಾಬಲ್ಯ ಇರುವ ಪ್ರದೇಶಗಳಲ್ಲಿ ಈ ಹಿಂಜರಿಕೆ ವರದಿಯಾಗಿದೆ ಎಂದು ಅದು ಹೇಳಿದೆ.
ಉತ್ತರಪ್ರದೇಶದಲ್ಲಿ ಲಸಿಕಾಕರಣ ತಂಡದಿಂದ ತಪ್ಪಿಸಲು ಡ್ರಮ್ ನ ಹಿಂದೆ ಅಡಗಿ ಕುಳಿತ ಹಿರಿಯ ಮಹಿಳೆಯೋರ್ವರ ಇತ್ತೀಚೆಗಿನ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಇದು ದೇಶದ ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ನೀಡುವ ಸವಾಲಿನ ಮೇಲೆ ಬೆಳಕು ಚೆಲ್ಲಿದೆ ಎಂದು ಅದು ಹೇಳಿದೆ. ಅನಂತರ ಆ ಮಹಿಳೆ ಅಡಗಿ ಕುಳಿತ ಸ್ಥಳದಿಂದ ಹೊರ ಬಂದಿದ್ದರು ಹಾಗೂ ಅದೇ ದಿನ ಲಸಿಕೆ ತೆಗೆದುಕೊಂಡಿದ್ದರು.
ಮಧ್ಯಪ್ರದೇಶದಲ್ಲಿ ನಡೆದ ಇದೇ ರೀತಿಯ ಇನ್ನೊಂದು ಘಟನೆಯಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಗ್ರಾಮ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲು ಉಜ್ಜೈನಿ ಜಿಲ್ಲೆಯ ಮಲಿಖೇಡಿ ಗ್ರಾಮಕ್ಕೆ ಮೇ 24ರಂದು ಭೇಟಿ ನೀಡಿದ್ದ ಮಹಿಳಾ ತಹಶೀಲ್ದಾರ್ ಮೇಲೆ ಗ್ರಾಮ ನಿವಾಸಿಗಳು ದಾಳಿ ನಡೆಸಿದ್ದರು.
ಪರಿಸ್ಥಿತಿ ಸುಧಾರಿಸಲು ಬುಡಕಟ್ಟು ವ್ಯವಹಾರಗಳ ಸಚಿವಾಲಯದೊಂದಿಗಿನ ನಿಕಟ ಸಹಭಾಗಿತ್ವದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸರಕಾರ ತಿಳಿಸಿದೆ.