ಕೋವಿಡ್ ನಿಂದ ಚೇತರಿಸಿಕೊಂಡವರಿಗೆ ಲಸಿಕೆಯ ಒಂದೇ ಡೋಸ್ ಸಾಕು: ಅಧ್ಯಯನದ ವರದಿಯಲ್ಲಿ ಉಲ್ಲೇಖ

ಹೊಸದಿಲ್ಲಿ, ಜೂ.11: ಕೊರೋನ ಸೋಂಕಿನ ಸೌಮ್ಯಲಕ್ಷಣವಿದ್ದು ಚೇತರಿಸಿಕೊಂಡವರಿಗೆ ಕೊರೋನ ಸೋಂಕಿನ ವಿರುದ್ಧದ ಒಂದೇ ಲಸಿಕೆ ಸಾಕಾಗುತ್ತದೆ ಎಂದು ಭಾರತದಲ್ಲಿ ನಡೆಸಿದ ಅಧ್ಯಯನ ವರದಿ ತಿಳಿಸಿದೆ. ಕೊರೋನ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಸೋಂಕಿನ ವಿರುದ್ಧದ ಪ್ರತಿರೋಧ ಶಕ್ತಿ ದಿರ್ಘ ಕಾಲದವರೆಗೆ ಇರುತ್ತದೆ.
ಮನುಷ್ಯನ ದೇಹದಲ್ಲಿರುವ ಪ್ರತಿರೋಧ ಶಕ್ತಿಯ ಎರಡು ಬಾಹುಗಳಾದ ಟಿ ಜೀವಕೋಶ (ಬಿಳಿ ರಕ್ತಕಣ) ಮತ್ತು ಬಿ ಜೀವಕೋಶ(ಬಿ ರಕ್ತಕಣದ ಮತ್ತೊಂದು ವಿಧ)ಗಳಲ್ಲಿ ಸುದೀರ್ಘಾವಧಿಯವರೆಗೆ ರೋಗನಿರೋಧಕದ ಸ್ಮರಣೆ ಉಳಿಯುವುದರಿಂದ ಕೊರೋನ ಸೋಂಕಿನಿಂದ ಚೇತರಿಸಿಕೊಂಡವರು ಲಸಿಕೆಯ ಒಂದೇ ಡೋಸ್ ಪಡೆದರೆ ಸಾಕಾಗುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿಯ ಡಾ. ನಿಮೇಶ್ ಗುಪ್ತಾ ಮತ್ತು ತಂಡದವರು ಹೊಸದಿಲ್ಲಿಯ ಎಐಐಎಂಎಸ್ನ ಡಾ. ಅಶೋಕ್ ಶರ್ಮ ಮತ್ತು ಡಾ. ಪೂನಂ ಅವರ ಸಹಯೋಗದಲ್ಲಿ ಈ ಅಧ್ಯಯನ ನಡೆಸಿದ್ದಾರೆ. ಅಧ್ಯಯನಕ್ಕೆ ಒಳಗಾದ ಭಾರತೀಯ ರೋಗಿಗಳಲ್ಲಿ ಸುಮಾರು 70% ರೋಗಿಗಳಲ್ಲಿ ಸಾರ್ಸ್-ಸಿಒವಿ-2 ಪ್ರತಿಕ್ರಿಯಾತ್ಮಕ ಬಿಳಿ ರಕ್ತಕಣಗಳು ಅತ್ಯಧಿಕ ಮಟ್ಟದಲ್ಲಿದ್ದವು. ಈ ಬಿಳಿ ರಕ್ತಕಣಗಳು ಮನುಷ್ಯನ ಪ್ರತಿರೋಧ ವ್ಯವಸ್ಥೆಯ ಪ್ರಧಾನ ಅಂಗವಾಗಿದೆ. ಇವು ಸೋಂಕಿನ ಪರಿಣಾಮವನ್ನು ಸಂಪೂರ್ಣ ದೂರಗೊಳಿಸದಿದ್ದರೂ ಸೋಂಕಿನ ತೀವ್ರತೆಯನ್ನು ತಗ್ಗಿಸಬಲ್ಲದು ಎಂದು ವರದಿ ಹೇಳಿದೆ.
ಜಾಗತಿಕವಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸವಾಲು ಎಸೆದಿರುವ ಕೊರೋನ ಸೋಂಕಿನ ನಿಯಂತ್ರಣಕ್ಕೆ ಲಸಿಕೀಕರಣ ಪರಿಣಾಮಕಾರಿ ಅಸ್ತ್ರ ಎಂದು ಈಗಾಲೇ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಜನತೆ ಕೋವಿಡ್-19 ವೈರಸ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ತಿಳಿದುಕೊಳ್ಳಲು ಮತ್ತು ಭಾರತದಲ್ಲಿ ಲಸಿಕೀಕರಣ ಪ್ರಕ್ರಿಯೆ ಮುಂದುವರಿಸಲು ಈ ಅಧ್ಯಯನ ವರದಿಯ ಮಾಹಿತಿ ಪೂರಕಾಗಿದೆ ಎಂದು ತಜ್ಞರ ತಂಡ ಹೇಳಿದೆ.







