'ನಿಮ್ಮ ಪರವಾಗಿ ಸದಾ ಹೋರಾಡಲು ಸಿದ್ಧ': ನಟ ಚೇತನ್‍ಗೆ ಬ್ಯಾಮ್‍ಸೆಫ್ ಅಧ್ಯಕ್ಷ ವಾಮನ್ ಮೇಶ್ರಾಮ್ ಬೆಂಬಲ

ಬೆಂಗಳೂರು, ಜೂ.11: ಬ್ರಾಹ್ಮಣ್ಯಕ್ಕೆ ಸಂಬಂಧಿಸಿದಂತೆ ನಟ ಚೇತನ್ ಮಾಡಿದ್ದ ಟ್ವೀಟ್ ಹಿನ್ನೆಲೆಯಲ್ಲಿ ರಾಜ್ಯದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಹೊಸದಿಲ್ಲಿಯ ಅಖಿಲ ಭಾರತ ಹಿಂದುಳಿದ(ಎಸ್ಸಿ, ಎಸ್ಟಿ, ಓಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಿಬ್ಬಂದಿಗಳ ಒಕ್ಕೂಟ(ಬಿಎಎಂಸಿಇಎಫ್-ಬ್ಯಾಮ್‍ಸೆಫ್)ದ ಅಧ್ಯಕ್ಷ ವಾಮನ್ ಮೇಶ್ರಾಮ್, ನಟ ಚೇತನ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನಟ ಚೇತನ್‍ಗೆ ಪತ್ರ ಬರೆದಿರುವ ವಾಮನ್ ಮೇಶ್ರಾಮ್, ನಮ್ಮ ಸಂಘಟನೆಯು ನಿಮ್ಮ ಪರವಾಗಿ ಸದಾ ಹೋರಾಡಲು ಸಿದ್ಧವಾಗಿದೆ. ಈ ಹೋರಾಟದಲ್ಲಿ ನಮ್ಮ ಸಂಘಟನೆ ನಿಮ್ಮ ಜೊತೆಯಲ್ಲಿ ಇರಲಿದೆ. ಇಡೀ ದೇಶದಲ್ಲಿ ಬ್ರಾಹ್ಮಣ್ಯದಿಂದ ಎದುರಾಗುವ ಅನ್ಯಾಯದ ವಿರುದ್ಧ ನಮ್ಮ ಸಂಘಟನೆ ಹೋರಾಡುತ್ತಿದೆ. ನಿಮಗೆ ಅಗತ್ಯವಿರುವ ಕಾನೂನು ನೆರವು ನೀಡಲು ನಾವು ಸಿದ್ಧವಾಗಿದ್ದೇವೆ ಎಂದು ಅಭಯ ನೀಡಿದ್ದಾರೆ.
ಬ್ರಾಹ್ಮಣ್ಯದ ವಿರುದ್ಧದ ನಿಮ್ಮ ಹೋರಾಟವನ್ನು ನಾವು ಸ್ವಾಗತಿಸುತ್ತೇವೆ. ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವವನ್ನು ಬ್ರಾಹ್ಮಣ್ಯದ ಸಾಮಾಜಿಕ ಶ್ರೇಣಿಯಲ್ಲಿ ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ನೀವು ಸರಿಯಾದ ಹಾದಿಯಲ್ಲೆ ಸಾಗುತ್ತಿದ್ದೀರಾ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ವಾಮನ್ ಮೇಶ್ರಾಮ್ ತಿಳಿಸಿದ್ದಾರೆ.





