ಪಿಎನ್ ಬಿ ವಂಚನೆ ಪ್ರಕರಣ: ಚೋಕ್ಸಿ ಪತ್ನಿಯ ವಿರುದ್ಧ ಆರೋಪಪಟ್ಟಿ ದಾಖಲಿಸಲು ನಿರ್ಧಾರ
ಹೊಸದಿಲ್ಲಿ, ಜೂ.11: ಪಿಎನ್ಬಿ ಬ್ಯಾಂಕ್ಗೆ 13,500 ಕೋಟಿ ರೂ. ಸಾಲ ಮರುಪಾವತಿಸದೆ ವಂಚಿಸಿದ ಪ್ರಕರಣದಲ್ಲಿ ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿಯ ಪತ್ನಿ ಪ್ರೀತಿ ಚೋಕ್ಸಿ ವಿುದ್ಧ ಆರೋಪಪಟ್ಟಿ ದಾಖಲಿಸುವುದಾಗಿ ಜಾರಿ ನಿರ್ದೇನಾಲಯ ಅಧಿಕಾರಿಗಳು ಹೇಳಿದ್ದಾರೆ.
ಮೆಹುಲ್ ಚೋಕ್ಸಿಯ ಒಡೆತನದ ಬಹುತೇಕ ಕಂಪೆನಿಗಳ ದಾಖಲೆಯಲ್ಲಿ ಪ್ರೀತಿ ಚೋಕ್ಸಿಯನ್ನು ನಾಮಿನಿ ಎಂದು ಹೆಸರಿಸಲಾಗಿದೆ. ಸಾಲ ಪಡೆದ ಹಣವನ್ನು ಕೆಲವು ನಕಲಿ ಸಂಸೆ್ಥಗಳ ಹೆಸರಿಗೆ ವರ್ಗಾಯಿಸಲಾಗಿದ್ದು, ಪ್ರೀತಿ ಚೋಕ್ಸಿ ಈ ಹಣದ ಫಲಾನುಭವಿಯಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿರುವುದರಿಂದ, ಪ್ರಕರಣದಲ್ಲಿ ಅವರೂ ಆರೋಪಿ ಎಂದು ಹೆಸರಿಸಿ ಆರೋಪಟ್ಟಿ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ದುಬೈಯಲ್ಲಿರುವ ಆಸ್ತಿಯನ್ನು ಜಾರಿನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಈ ಮಧ್ಯೆ, ನೀರವ್ ಮೋದಿಯೊಂದಿಗೆ ಯಾವುದೇ ವ್ಯವಹಾರ ಸಂಬಂಧ ಹೊಂದಿಲ್ಲದಿದ್ದರೂ ತನ್ನ ಪತಿಯ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಿರುವುದು ಸರಿಯಲ್ಲ. ಆರೋಪಪಟ್ಟಿಯಲ್ಲಿ ಪತಿಯ ಬಗ್ಗೆ ಯಾವುದೇ ಆರೋಪ ಉಲ್ಲೇಖಿಸಿಲ್ಲ ಎಂದು ಪ್ರೀತಿ ಚೋಕ್ಸಿ ಹೇಳಿರುವುದಾಗಿ ವರದಿಯಾಗಿದೆ. ಆದರೆ ಈ ಹೇಳಿಕೆ ಸರಿಯಲ್ಲ, 2018ರ ಆಗಸ್ಟ್ 27ರಂದು ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಮೆಹುಲ್ ಚೋಕ್ಸಿ ಆರೋಪಿ ನಂ.1 ಎಂದು ಹೆಸರಿಸಲಾಗಿದೆ ಎಂದು ‘ಇಂಡಿಯಾ ಟುಡೇ’ ಹೇಳಿದೆ.







