ವಿದ್ಯಾರ್ಥಿಗಳು ಮೊದಲ ಲಯಕ್ಕೆ ಬರಲು 4 ವರ್ಷ ಬೇಕಾಗಬಹುದು: ಶಿಕ್ಷಣ ತಜ್ಞ ಡಾ.ರಝಾಕ್ ಉಸ್ತಾದ್
ಶಿಕ್ಷಣ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ವಿಚಾರಗೋಷ್ಠಿ
ಬೆಂಗಳೂರು, ಜೂ.11: ಕೊರೋನ ಸಂಕಟದಿಂದ ರಾಜ್ಯ ಮತ್ತು ದೇಶದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳು ಕಂಗೆಟ್ಟು ಹೋಗಿದ್ದು, ಈ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆಯ ಮೇಲೆ ಆಗಿರುವ ಪರಿಣಾಮಗಳ ಕುರಿತು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಘಟಕದ ವತಿಯಿಂದ ಆನ್‍ಲೈನ್ ವೆಬಿನಾರ್ ವಿಚಾರಗೋಷ್ಠಿಯನ್ನು ಶುಕ್ರವಾರ ಏರ್ಪಡಿಸಲಾಗಿತ್ತು.
ಈ ವಿಚಾರಗೋಷ್ಠಿಯಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆಯ ಮೇಲೆ ಆಗಿರುವ ಪರಿಣಾಮಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಶಿಕ್ಷಣ ತಜ್ಞ ಡಾ.ರಝಾಕ್ ಉಸ್ತಾದ್, ಕೊರೋನದಿಂದ 2 ವರ್ಷ ಶಿಕ್ಷಣ ಸಂಸ್ಥೆಗಳು ಆಘಾತಕ್ಕೆ ಒಳಗಾಗಿವೆ. ವಿದ್ಯಾರ್ಥಿಗಳು ಮೊದಲನೆಯ ಲಯಕ್ಕೆ ಬರಬೇಕಾದರೆ ಕನಿಷ್ಠ 4 ವರ್ಷ ಬೇಕಾಗಬಹುದು ಎಂದರು.
ಆನ್ ಲೈನ್ ಶಿಕ್ಷಣ ತಂದೆ ತಾಯಿಯ ಆರ್ಥಿಕ ಪರಿಸ್ಥಿತಿ ಮೇಲೆ ಅವಲಂಬಿತವಾಗಿದೆ. ಶಾಲೆಗಳಲ್ಲಿ ದಾಖಲಾತಿ ಮಾಡಿಸಿ ಪಾಸ್ ಮಾಡುತ್ತೆವೆ ಎನ್ನುವ ಸರಕಾರದ ಹೇಳಿಕೆ ಖಂಡನಿಯ. ರಾಜ್ಯದಲ್ಲಿ ಶೇ. 60ರಷ್ಟು ವಿದ್ಯಾರ್ಥಿಗಳ ತಂದೆ ತಾಯಿ ಅಶಿಕ್ಷಿತರಾಗಿದ್ದು, ಆನ್‍ಲೈನ್ ಶಿಕ್ಷಣ ಇಂತಹ ಕುಟುಂಬಗಳ ಮೇಲೆ ದುಷ್ಪರಿಣಾಮ ಬಿರುತ್ತದೆ ಎಂದು ಅವರು ಹೇಳಿದರು.
ಸರಕಾರ ಕೋವಿಡ್‍ಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಸಡಿಲಿಕೆ ಮಾಡಿದ್ದರೂ ಶಿಕ್ಷಣದ ಬಗ್ಗೆ ಗಮನ ಹರಿಸದಿರುವದು ಮೂರ್ಖತನ. ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವುದು ಮೂರ್ಖತನ. ಸರಕಾರಿ ಶಾಲೆಗಳಲ್ಲಿ ಆನ್‍ಲೈನ್ ತರಗತಿಗಳನ್ನು ನಡೆಸುವ ವ್ಯವಸ್ಥೆಯೇ ಇಲ್ಲ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ರಝಾಕ್ ಉಸ್ತಾದ್ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ಕೊರೋನ ಕಾಲದಲ್ಲಿ ಸರಕಾರ ಶಿಕ್ಷಣ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಆನ್‍ಲೈನ್ ಕ್ಲಾಸ್ ನಿಂದ ಬಡವರು ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದರು.
ಹಳ್ಳಿಗಳಲ್ಲಿ ಸರಿಯಾಗಿ ವಿದ್ಯುತ್ ಇರುವುದಿಲ್ಲ. ಇಂಟರ್‍ನೆಟ್ ಸಮಸ್ಯೆ ಹೆಚ್ಚಿದೆ. ಮಕ್ಕಳ ಪೋಷಕರು ಅವಿದ್ಯಾವಂತರು. ಅವರ ಆರ್ಥಿಕ ಪರಿಸ್ಥಿತಿಯೂ ಸರಿ ಇರುವುದಿಲ್ಲ. ಅವರು ಮಕ್ಕಳಿಗೆ ದುಬಾರಿ ಬೆಲೆಯ ಮೊಬೈಲ್ ಫೋನ್ ಹೇಗೆ ಖರೀದಿಸಿ ಕೊಡುತ್ತಾರೆ. ಆನ್‍ಲೈನ್ ತರಗತಿಗಳು ಮಕ್ಕಳ ಕಲಿಕೆಯ ಸಾಮಥ್ರ್ಯವನ್ನು ಹೆಚ್ಚಿಸುವುದಿಲ್ಲ ಎಂದು ಅವರು ಹೇಳಿದರು.
ವೆಬಿನಾರ್ ವಿಚಾರಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ತಾಜುದ್ದೀನ್ ಶರೀಫ್ ಹಾಗೂ ಮಾಧ್ಯಮ ಕಾರ್ಯದರ್ಶಿ ಅಝೀಝ್ ಜಾಗಿರ್ದಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.







