ಕೇರಳದ ಮೀನುಗಾರರ ಹತ್ಯೆ ಪ್ರಕರಣ: ಇಟಲಿಯ ನೌಕಾ ಸಿಬ್ಬಂದಿ ವಿರುದ್ಧದ ವಿಚಾರಣೆ ಅಂತ್ಯ; ಸುಪ್ರೀಂಕೋರ್ಟ್

ಹೊಸದಿಲ್ಲಿ, ಜೂ.11: ಕೇರಳ ಕಡಲತೀರದಲ್ಲಿ 2012ರ ಫೆಬ್ರವರಿಯಲ್ಲಿ ಇಬ್ಬರು ಮೀನುಗಾರರ ಹತ್ಯೆ ಪ್ರಕರಣದಲ್ಲಿ ಇಟಲಿಯ ನೌಕಾಸಿಬಂದಿಗಳ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಮುಕ್ತಾಯಗೊಳಿಸುವ ಮತ್ತು ಸಂತ್ರಸ್ತರ ಕುಟುಂಬಗಳಿಗೆ 10 ಕೋಟಿ ರೂ. ಪರಿಹಾರ ಒದಗಿಸುವ ಬಗ್ಗೆ ಜೂನ್ 15ರಂದು ಅಂತಿಮ ಆದೇಶ ನೀಡುವುದಾಗಿ ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
ಅಂತರಾಷ್ಟ್ರೀಯ ನ್ಯಾಯಮಂಡಳಿಯ ನಿಯಮ ಹಾಗೂ ಭಾರತ, ಇಟಲಿ ಮತ್ತು ಕೇರಳ ಸರಕಾರದ ಒಪ್ಪಂದದ ಪ್ರಕಾರ ಇಟಲಿಯ ನಾಗರಿಕರಾದ ಮಸ್ಸಿಮಿಲಾನೊ ಲಟೋರ್ ಮತ್ತು ಸಾಲ್ವದೋರ್ ಗಿರೋನಿಯ ವಿರುದ್ಧದ ಆರೋಪಗಳ ವಿಚಾರಣೆ ಇನ್ನು ಮುಂದೆ ಇಟಲಿಯಲ್ಲಿ ಮುಂದುವರಿಯಲಿದೆ ಎಂದು ಸುಪ್ರೀಂಕೋರ್ಟ್ನ ರಜಾಕಾಲದ ನ್ಯಾಯಪೀಠ ಹೇಳಿದೆ.
ಪರಿಹಾರ ಮೊತ್ತದಲ್ಲಿ ಇಬ್ಬರು ಮೀನುಗಾರರ ಕುಟುಂಬಕ್ಕೆ ತಲಾ 4 ಕೋಟಿ ರೂ. ಮತ್ತು ಮೀನುಗಾರರು ಇದ್ದ ದೋಣಿ ‘ಸೈಂಟ್ ಅಂಟೋನಿ’ಯ ಮಾಲಕರಿಗೆ 2 ಕೋಟಿ ರೂ. ನೀಡಲಾಗುವುದು ಎಂದು ನ್ಯಾಯಪೀಠ ಹೇಳಿದೆ. ಇಟಲಿಯ ಸರಕಾರ ಈ ಹಿಂದೆ ನೀಡಿದ್ದ ತಾತ್ಕಾಲಿಕ ಪರಿಹಾರದ ಹೊರತಾಗಿ 10 ಕೋಟಿ ರೂ. ಪರಿಹಾರ ಮೊತ್ತವನ್ನು ಕೇಂದ್ರ ಸರಕಾರಕ್ಕೆ ಹಸ್ತಾಂತರಿಸಿದ್ದು ಇದನ್ನು ಸುಪ್ರೀಂಕೋರ್ಟ್ನ ನೋಂದಣಿ ಕಚೇರಿಯಲ್ಲಿ ಜಮೆ ಮಾಡಿರುವುದಾಗಿ ಕೇಂದ್ರದ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ನ್ಯಾಯಾಲಯಕ್ಕೆ ತಿಳಿಸಿದರು.
2012ರ ಫೆಬ್ರವರಿಯಲ್ಲಿ ತೈಲ ಸಾಗಿಸುತ್ತಿದ್ದ ಇಟಲಿಯ ನೌಕೆ ‘ಎಂ.ವಿ ಎನ್ರಿಕಾ ಲೆಕ್ಸೀ’ಯ ಇಬ್ಬರು ಸಿಬಂದಿಗಳು ಭಾರತದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯನ್ನು ಕಡಲ್ಗಳ್ಳರ ದೋಣಿ ಎಂದು ತಪ್ಪು ತಿಳಿದು ಗುಂಡು ಹಾರಿಸಿದ್ದರಿಂದ ಇಬ್ಬರು ಮೀನುಗಾರರು ಮೃತಪಟ್ಟಿದ್ದರು ಎಂದು ಆರೋಪಿಸಲಾಗಿದೆ. ಅಂತರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪಿನಂತೆ, ನೌಕಾಸಿಬಂದಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಇಟಲಿಯ ಪರ ನ್ಯಾಯವಾದಿ ಸೊಹೈಲ್ ದತ್ತಾ ವಾದಿಸಿದರು.
ಆದರೆ ಇದನ್ನು ಆಕ್ಷೇಪಿಸಿದ ತುಷಾರ್ ಮೆಹ್ತ, ನೌಕಾಸಿಬಂದಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸುವುದು ಯಾವ ದೇಶದ (ಇಟಲಿ ಅಥವಾ ಭಾರತ) ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ನಿರ್ಧರಿಸುವಂತೆ ಅಂತರಾಷ್ಟ್ರೀಯ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಎರಡೂ ದೇಶಗಳಿಗೆ ಸಮಾನ ಅಧಿಕಾರವಿದೆ ಎಂದು ನ್ಯಾಯಮಂಡಳಿ ತೀರ್ಪು ನೀಡಿದೆ ಎಂದು ವಾದಿಸಿದರು. ಇದೀಗ ಭಾರತದಲ್ಲಿನ ವಿಚಾರಣೆ ಮುಗಿದಿದ್ದು, ಮುಂದೆ ಇಟಲಿಯಲ್ಲಿ ಮುಂದುವರಿಯಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಆರೋಪಿಗಳ ಪೈಕಿ ಮೆಸ್ಸಿಮಿಲಾನೋ 2014ರ ಆಗಸ್ಟ್ 31ರಂದು ಮೆದುಳಿನ ಪಾರ್ಶ್ವವಾಯು ಕಾಯಿಲೆಗೆ ತುತ್ತಾದ ಹಿನ್ನೆಲೆಯಲ್ಲಿ ಜಾಮೀನು ಮಂಜೂರಾಗಿತ್ತು. ಬಳಿಕ 2014ರ ಆಗಸ್ಟ್ನಲ್ಲಿ 4 ತಿಂಗಳ ಮಟ್ಟಿಗೆ ಅವರು ಸ್ವದೇಶಕ್ಕೆ ತೆರಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು , ಅಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪು ಹೊರಬೀಳುವವರೆಗೂ ಸ್ವದೇಶದಲ್ಲಿ ನೆಲೆಸಲು ಅವಕಾಶ ವಿಸ್ತರಿಸಲಾಗಿತ್ತು.
2016ರ ಮೇ 26ರಂದು ಗಿರೋನಿಗೂ ಜಾಮೀನು ದೊರಕಿದ್ದು ಅವರಿಗೆ ಸ್ವದೇಶಕ್ಕೆ ತೆರಳಲು ಮತ್ತು ಅಂತರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪು ಹೊರಬೀಳುವವರೆಗೂ ಸ್ವದೇಶದಲ್ಲಿ ನೆಲೆಸಲು ಅವಕಾಶ ನೀಡಲಾಗಿದೆ.







