ದೇವಸ್ಥಾನದಲ್ಲಿ ಸಂಗ್ರಹವಾಗುತ್ತಿದ್ದ ಹಣ ಮಸೀದಿಗೆ ಹೋಗುತ್ತಿದೆ ಎಂದು ಅಪಪ್ರಚಾರ: ಯು.ಟಿ.ಖಾದರ್

ಬೀದರ್, ಜೂ.11: ಮುಜರಾಯಿ ಇಲಾಖೆ ಅಧೀನದ ದೇವಸ್ಥಾನಗಳಲ್ಲಿ ಸಂಗ್ರಹವಾಗುತ್ತಿದ್ದ ಹಣ ಮಸೀದಿಗೆ ಹೋಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು, ರಾಜ್ಯ ಸರಕಾರ ಅದಕ್ಕೆ ಸ್ಪಷ್ಟೀಕರಣ ನೀಡಿ ಜನರಲ್ಲಿನ ಗೊಂದಲ ನಿವಾರಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು.
ಶುಕ್ರವಾರ ಬೀದರ್ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇವಸ್ಥಾನಗಳ ಹುಂಡಿಗಳಲ್ಲಿ ದಾನದ ರೂಪದಲ್ಲಿ ಬಂದ ಆದಾಯವನ್ನು ಆಯಾ ದೇವಸ್ಥಾನಗಳ ಅಭಿವೃದ್ಧಿಗಾಗಿಯೇ ಬಳಸಲಾಗುತ್ತಿದೆ. ಶೇ. 10ರಷ್ಟನ್ನು ಮಾತ್ರ ಅನ್ಯ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ತಿಳಿಸಿದರು.
ಹಿಂದೆ ರಾಜ್ಯದಲ್ಲಿ 34 ಸಾವಿರ ದೇವಸ್ಥಾನಗಳು, 700 ಮಸೀದಿಗಳು ಹಾಗೂ 30 ಜೈನ ಬಸಿದಿಗಳು ಇದ್ದವು. ಇವುಗಳ ನಿರ್ವಹಣೆಗಾಗಿ ಇನಾಮ್ ಜಮೀನು ಕೊಡಲಾಗಿತ್ತು. ದಾನ ರೂಪದಲ್ಲಿ ಬಂದ ಆದಾಯವನ್ನು ಧಾರ್ಮಿಕ ಕೇಂದ್ರಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು ಎಂದು ಹೇಳಿದರು.
ರಾಜ್ಯ ಸರಕಾರ ಹೊಸದಾಗಿ ಹಿಂದೂ ದೇವಸ್ಥಾನಗಳಿಂದ ಬಂದ ಆದಾಯವನ್ನು ಹಿಂದೂ ದೇವಸ್ಥಾನಗಳಿಗೆ, ಮುಸ್ಲಿಂ ಧಾರ್ಮಿಕ ಕೇಂದ್ರಗಳಿಂದ ಬಂದ ಹಣವನ್ನು ಮಸೀದಿಗಳಿಗೆ ಬಳಸುವಂತೆ ಆದೇಶ ಹೊರಡಿಸಿದೆ. ಅನುದಾನ ಕೊಡುವುದನ್ನು ಬಂದ್ ಮಾಡಿಲ್ಲ. ಆದರೆ, ಅಪಪ್ರಚಾರ ಮಾಡುವುದು ಮುಂದುವರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿರೀಕ್ಷೆಯ ಮಟ್ಟದಲ್ಲಿ ಕೋವಿಡ್ ಪರೀಕ್ಷೆಗಳು ನಡೆಯುತ್ತಿಲ್ಲ. ಆದರೆ, ಸರಕಾರ ಸೋಂಕಿನ ಪ್ರಮಾಣ ಇಳಿದಿದೆ ಎಂದು ತಪ್ಪು ಮಾಹಿತಿ ಕೊಡುತ್ತಿದೆ ಎಂದರು.
ಬಿಜೆಪಿ ಲಸಿಕೆ ವಿಜ್ಞಾನದ ಬಗ್ಗೆ ಮಾತನಾಡುತ್ತಿಲ್ಲ. ಲಸಿಕೆ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ. ದೇಶದಲ್ಲಿ ಎಷ್ಟು ಲಸಿಕೆ ಉತ್ಪಾದನೆಯಾಗುತ್ತಿದೆ, ಎಷ್ಟು ಪೂರೈಕೆಯಾಗುತ್ತಿದೆ, ಕೋವಿಡ್ ಲಸಿಕೆ ಯಾರಿಗೆ ಕೊಡಬೇಕು, ಎರಡು ಡೋಸ್‍ಗಳ ಮಧ್ಯೆ ಎಷ್ಟು ಅಂತರ ಇರಬೇಕು ಎನ್ನುವ ಸ್ಪಷ್ಟತೆ ಇಲ್ಲ. ಅಗತ್ಯ ಪ್ರಮಾಣದಲ್ಲಿ ಲಸಿಕೆ ದಾಸ್ತಾನು ಮಾಡಿ ಜನರಿಗೆ ಲಸಿಕೆ ಕೊಡಬೇಕು. ಲಸಿಕೆ ಕೊಡುವ ವಿಚಾರದಲ್ಲಿ ಆರಂಭದಿಂದಲೂ ಗೊಂದಲ ಮೂಡಿಸುತ್ತ ಬರಲಾಗಿದೆ ಎಂದು ಖಾದರ್ ಅವರು ಆರೋಪಿಸಿದರು.
ಶಾಸಕ ರಹೀಂ ಖಾನ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಡಿ.ಕೆ.ಸಂಜುಕುಮಾರ, ಸುಧಾಕರ ಕೊಳ್ಳೂರ ಉಪಸ್ಥಿತರಿದ್ದರು.







