ಫ್ರೆಂಚ್ ಓಪನ್ ಟೆನಿಸ್: 13 ಬಾರಿಯ ಚಾಂಪಿಯನ್ ನಡಾಲ್ ವಿರುದ್ಧ ಜೋಕೊವಿಕ್ ಐತಿಹಾಸಿಕ ಜಯ

ಪ್ಯಾರೀಸ್ : ಹದಿಮೂರು ಬಾರಿಯ ಚಾಂಪಿಯನ್ ರಫೆಲ್ ನಡಾಲ್ ವಿರುದ್ಧ ಶುಕ್ರವಾರ ಐತಿಹಾಸಿಕ ಜಯ ಸಾಧಿಸುವ ಮೂಲಕ ನೊವಾಕ್ ಜೊಕೋವಿಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ತಲುಪಿದ್ದಾರೆ.
ನಡಾಲ್‌ಗೆ ಇದು 16 ವರ್ಷಗಳ 108 ಪಂದ್ಯಗಳಲ್ಲಿ ಮೂರನೇ ಸೋಲು. ಉಭಯ ಆಟಗಾರರ ವೃತ್ತಿ ಜೀವನದ ಪರಸ್ಪರ 58ನೇ ಸೆಣಸಾಟದಲ್ಲಿ ಜೋಕೋವಿಕ್ 3-6, 6-3, 7-6 (7/4), 6-2 ಸೆಟ್‌ಗಳ ಅಮೋಘ ಜಯ ಸಾಧಿಸಿದರು.
ಈ ಮೂಲಕ 19ನೇ ಪ್ರಮುಖ ಟೂರ್ನಿ ಗೆಲ್ಲುವ ಹಾಗೂ 50 ವರ್ಷಗಳ ಗ್ರ್ಯಾಂಡ್‌ಸ್ಲಾಂ ಇತಿಹಾಸದಲ್ಲಿ ಎಲ್ಲ ನಾಲ್ಕು ಗ್ರ್ಯಾಂಡ್ ಸ್ಲಾಮ್‌ಗಳನ್ನು ಎರಡು ಬಾರಿ ಗೆದ್ದ ಮೊದಲ ವ್ಯಕ್ತಿ ಎಂಬ ದಾಖಲೆ ಸೇರುವ ನಡಾಲ್ ಕನಸನ್ನು ನುಚ್ಚು ನೂರು ಮಾಡಿದರು.
2016ರ ಫ್ರೆಂಚ್ ಓಪನ್‌ನಲ್ಲಿ ಟ್ರೋಫಿ ಗೆದ್ದಿದ್ದ ಜೊಕೋವಿಕ್, 2015ರ ಟೂರ್ನಿಯಲ್ಲೂ ಜೊಕೋವಿಕ್ ಅವರನ್ನು ಸದೆ ಬಡಿದಿದ್ದರು. ರವಿವಾರ ನಡೆಯುವ ಫೈನಲ್‌ನಲ್ಲಿ ಜೋಕೊವಿಕ್ ಸ್ಟೆಫಾನೊಸ್ ಸಿಟ್ಸಿಪಾಸ್ ವಿರುದ್ಧ 29ನೇ ಚಾಂಪಿಯನ್ ಶಿಪ್ ಗಾಗಿ ಸೆಣೆಸುವರು. ಇದಕ್ಕೂ ಮುನ್ನ ನಡೆದ ಇನ್ನೊಂದು ಸೆಮಿಫೈನಲ್ ನಲ್ಲಿ ಜರ್ಮನಿಯ ಅಲೆಗ್ಸಾಂಡರ್ ಝೆರೇವ್ ವಿರುದ್ಧ 6-3, 6-3, 4-6, 6-3 ಅಂತರದ ಜಯ ಸಾಧಿಸುವ ಮೂಲಕ ಸಿಟ್ಸಿಪಾಸ್, ಗ್ರ್ಯಾಂಡ್ ಸ್ಲಾಂ ಫೈನಲ್ ತಲುಪಿದ ಮೊದಲ ಗ್ರೀಕ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ನಾಲ್ಕು ಗಂಟೆ 11 ನಿಮಿಷ ಕಾಲ ನಡೆದ ಸುಧೀರ್ಘ ಹೋರಾಟದ ಬಳಿಕ "ಇಂಥ ನಂಬಲಸಾಧ್ಯ ಪಂದ್ಯದಲ್ಲಿ ನಡಾಲ್ ವಿರುದ್ಧ ಆಡುವುದು ದೊಡ್ಡ ಗೌರವವಾಗಿತ್ತು" ಎಂದು ಜೋಕೊವಿಕ್ ಪ್ರತಿಕ್ರಿಯಿಸಿದರು. ಇದು ಪ್ಯಾರಿಸ್‌ನಲ್ಲಿ ನಾನು ಆಡಿದ ಸರ್ವಶ್ರೇಷ್ಠ ಪಂದ್ಯ ಎಂದು ಬಣ್ಣಿಸಿದರು. ಪರಸ್ಪರರ ಸ್ಪರ್ಧೆಯಲ್ಲಿ ನಡಾಲ್ 30 ಪಂದ್ಯಗಳನ್ನು ಗೆದ್ದಿದ್ದರೆ ಜೊಕೋವಿಕ್ 28 ಪಂದ್ಯಗಳನ್ನು ಜಯಿಸಿದ್ದಾರೆ.
"ರಫಾ ಅವರ ಸಾಧನೆಗಳನ್ನು ಬಣ್ಣಿಸಲು ಪದಗಳಿಲ್ಲ. ರೊನಾಲ್ಡ್ ಗ್ಯಾರೋಸ್‌ನಲ್ಲಿ ಅವರ ಜಯದ ಪ್ರಮಾಣ ನಂಬಲಸಾಧ್ಯ. ಅವರನ್ನು ಇಲ್ಲಿ ಎದುರಿಸುವುದೆಂದರೆ ಮೌಂಟ್ ಎವರೆಸ್ಟ್ ಏರಿದಂತೆ" ಎಂದು ಭಾವುಕರಾಗಿ ನುಡಿದರು.