ಆರ್‌ಟಿಓ ಪರೀಕ್ಷೆ ಇಲ್ಲದೇ ಚಾಲನಾ ಲೈಸನ್ಸ್ !

ಹೊಸದಿಲ್ಲಿ : ದೇಶದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಪರೀಕ್ಷೆಯನ್ನು ಎದುರಿಸದೇ ವಾಹನ ಚಾಲನಾ ಲೈಸನ್ಸ್ ಪಡೆಯುವ ದಿನ ಶೀಘ್ರದಲ್ಲೇ ಬರಲಿದೆ. ಮಾನ್ಯತೆ ಪಡೆದ ಚಾಲನಾ ತರಬೇತಿ ಶಾಲೆಗಳಲ್ಲಿ ಯಶಸ್ವಿ ತರಬೇತಿ ಪಡೆದ ಬಳಿಕ ನೇರವಾಗಿ ಲೈಸನ್ಸ್ ಪಡೆಯಲು ಅವಕಾಶ ಮಾಡಿಕೊಡುವ ಹೊಸ ನಿಯಮಾವಳಿಯ ಸಂಬಂಧ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ತರಬೇತಿ ಶಾಲೆಯಲ್ಲೇ ನೀವು ತರಬೇತಿ ಪೂರ್ಣಗೊಳಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಎಲ್ಲ ವಯಸ್ಕರಿಗೆ ನಡೆಸುವ ಈ ಪರೀಕ್ಷೆಯನ್ನು ಎಲೆಕ್ಟ್ರಾನಿಕ್ ವಿಧಾನದ ಮೂಲಕ ದಾಖಲಿಸಿಕೊಳ್ಳಬೇಕಾಗುತ್ತದೆ.
"ಇಡೀ ಪ್ರಕ್ರಿಯೆ ತಂತ್ರಜ್ಞಾನ ಚಾಲಿತವಾಗಿದ್ದು, ಯಾವುದೇ ಮಾನವ ಹಸ್ತಕ್ಷೇಪ ಇರುವುದಿಲ್ಲ. ಸ್ಥಳಾವಕಾಶ, ಚಾಲನಾ ಟ್ರ್ಯಾಕ್, ಐಟಿ ಮತ್ತು ಬಯೋಮೆಟ್ರಿಕ್ ಸೌಲಭ್ಯ ಹೊಂದಿದ ಹಾಗೂ ನಿರ್ದಿಷ್ಟಪಡಿಸಿದ ಪಠ್ಯಕ್ರಮದಂತೆ ತರಬೇತಿ ನೀಡುವ ಸಂಸ್ಥೆಗಳಿಗೆ ಮಾನ್ಯತೆ ನೀಡಲಾಗುವುದು. ಕೇಂದ್ರವು ಪ್ರಮಾಣಪತ್ರವನ್ನು ನೀಡಿದ ಬಳಿಕ, ಅದು ಸಂಬಂಧಪಟ್ಟ ಮೋಟಾರು ವಾಹನ ಲೈಸನ್ಸ್ ಅಧಿಕಾರಿಗೆ ತಲುಪಲಿದೆ" ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಈ ಹೊಸ ನಿಯಮಾವಳಿ ಜುಲೈನಿಂದ ಜಾರಿಗೆ ಬರಲಿದೆ. ಅಂದರೆ ಇಂಥ ಚಾಲನಾ ತರಬೇತಿ ಸಂಸ್ಥೆಗಳನ್ನು ನಡೆಸಲು ಇಚ್ಛೆ ಇರುವವರು ರಾಜ್ಯ ಸರ್ಕಾರಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.