ಪಂಜಾಬ್ ಚುನಾವಣೆ:ಬಿಎಸ್ಪಿಯೊಂದಿಗೆ ಅಕಾಲಿ ದಳ ಮೈತ್ರಿ

ಹೊಸದಿಲ್ಲಿ: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆಯಿಂದಾಗಿ ಕಳೆದ ವರ್ಷ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿರುವ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) 2022 ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಜೊತೆ ಮೈತ್ರಿ ಮಾಡಿಕೊಂಡಿದೆ. ಮೈತ್ರಿ ಕುರಿತ ವಿವರಗಳನ್ನು ಶನಿವಾರ ಪ್ರಕಟಿಸಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಬಿಜೆಪಿಯಿಂದ ಬೇರ್ಪಟ್ಟ ಸುಖ್ಬೀರ್ ಸಿಂಗ್ ಬಾದಲ್ ನೇತೃತ್ವದ ಪಕ್ಷವು ಇದೀಗ ಹೊಸ ಮೈತ್ರಿ ಮೂಲಕ ಹಲವಾರು ಸ್ಥಾನಗಳಲ್ಲಿನ ಅಂತರವನ್ನು ತುಂಬುವ ಗುರಿ ಹೊಂದಿದೆ. ಈ ಹಿಂದೆ ಬಿಜೆಪಿ ಸ್ಪರ್ಧಿಸಿದ್ದ ಸೀಟುಗಳಲ್ಲಿ ಬಿಎಸ್ಪಿ ಸ್ಪರ್ಧಿಸಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ವಿಧಾನಸಭೆಯಲ್ಲಿ ಒಟ್ಟು 117 ಸೀಟುಗಳಿದ್ದು, ಬಿಎಸ್ಪಿಗೆ 20 ಸೀಟುಗಳನ್ನು ನೀಡಲಾಗುತ್ತದೆ. ಅಕಾಲಿ ದಳ 97 ಸೀಟುಗಳಲ್ಲಿ ಸ್ದರ್ಧಿಸಲಿದೆ.
"ಇಂದು ಪಂಜಾಬ್ ರಾಜಕೀಯಕ್ಕೆ ಹೊಸ ದಿನವಾಗಿದೆ. ಶಿರೋಮಣಿ ಅಕಾಲಿದಳ ಹಾಗೂ ಬಹುಜನ ಸಮಾಜ ಪಕ್ಷವು 2022ರ ಪಂಜಾಬ್ ರಾಜ್ಯ ಚುನಾವಣೆಯಲ್ಲಿಒಟ್ಟಿಗೆ ಹೋರಾಡಲಿವೆ. ಮುಂದಿನ ಚುನಾವಣೆಯಲ್ಲೂಒಟ್ಟಿಗೆ ಸ್ಪರ್ಧಿಸಲಿವೆ'' ಎಂದು ಸುಖ್ ಬಿರ್ ಸಿಂಗ್ ಬಾದಲ್ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
27 ವರ್ಷಗಳ ನಂತರ ಅಕಾಲಿ ದಳ ಹಾಗೂ ಬಿಎಸ್ಪಿ ಕೈಜೋಡಿಸುತ್ತಿವೆ. 1996 ರ ಲೋಕಸಭಾ ಚುನಾವಣೆಯಲ್ಲಿಕೊನೆಯ ಬಾರಿ ಅಕಾಲಿದಳ-ಬಿಎಸ್ಪಿ ಮೈತ್ರಿ ಮಾಡಿಕೊಂಡಿದ್ದವು. ಪಂಜಾಬ್ ನಲ್ಲಿ 13 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಗಳಿಸಿದ್ದವು. ಆಗ ಮಾಯಾವತಿ ನೇತೃತ್ವದ ಬಿಎಸ್ಪಿ ಸ್ಪರ್ಧಿಸಿದ್ದ ಎಲ್ಲಾ ಮೂರು ಸ್ಥಾನಗಳನ್ನು ಗೆದ್ದಿದ್ದರೆ, ಅಕಾಲಿ ದಳ 10 ಸ್ಥಾನಗಳಲ್ಲಿ ಎಂಟು ಸ್ಥಾನಗಳನ್ನು ಗೆದ್ದಿತ್ತು.
ಕಾಂಗ್ರೆಸ್, ಬಿಜೆಪಿ ಹಾಗೂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಯನ್ನು ಹೊರತುಪಡಿಸಿ ತಮ್ಮ ಪಕ್ಷವು ಇತರ ಎಲ್ಲ ಪಕ್ಷದೊಂದಿಗೆ ಒಪ್ಪಂದಕ್ಕೆ ಮುಕ್ತವಾಗಿದೆ ಎಂದು ಕಳೆದ ವಾರ ಸುಖ್ಬೀರ್ ಬಾದಲ್ ಘೋಷಿಸಿದ್ದರು.
ರಾಜ್ಯದಲ್ಲಿ ಶೇ. 31 ರಷ್ಟು ದಲಿತ ಮತಗಳ ಮೇಲೆ ಬಿಎಸ್ಪಿಗೆ ಸಾಕಷ್ಟು ಹಿಡಿತವಿದೆ. ದೋಬಾ ಪ್ರದೇಶದ 23 ಸ್ಥಾನಗಳಲ್ಲಿ ಈ ಮತಗಳ ಸಾಂದ್ರತೆಯು ಹೆಚ್ಚು ಮಹತ್ವದ್ದಾಗಿದೆ. ಪಂಜಾಬ್‌ನಲ್ಲಿ ಸುಮಾರು 40 ಪ್ರತಿಶತದಷ್ಟು ದಲಿತರು ಇದ್ದಾರೆ. ಅಕಾಲಿ ದಳ ಈ ಹಿಂದೆ ಬಿಜೆಪಿಗೆ ನೀಡಿದ್ದ 18-20 ಸ್ಥಾನಗಳಲ್ಲಿ ಬಿಎಸ್ಪಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.