ಆಯಿಶಾ ಸುಲ್ತಾನ ವಿರುದ್ಧ ದೇಶದ್ರೋಹ ಪ್ರಕರಣ: ಲಕ್ಷದ್ವೀಪದಲ್ಲಿ ರಾಜೀನಾಮೆ ನೀಡಿದ ಬಿಜೆಪಿ ನಾಯಕರು
ಆಯಿಶಾ ಸುಲ್ತಾನ (Photo: Facebook)
ಹೊಸದಿಲ್ಲಿ / ಲಕ್ಷದ್ವೀಪ: ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಕೋವಿಡ್ ನಿರ್ವಹಣೆಯನ್ನು ಟೀಕಿಸಿದ ಲಕ್ಷದ್ವೀಪ ಚಲನಚಿತ್ರ ನಿರ್ಮಾಪಕಿ ಆಯಿಶಾ ಸುಲ್ತಾನ ಅವರ ವಿರುದ್ಧ ದೇಶದ್ರೋಹ ಹಾಗೂ ದ್ವೇಷದ ಭಾಷಣ ಪ್ರಕರಣ ದಾಖಲಾದ ನಂತರ, ಬಿಜೆಪಿಯ 15 ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ತಮ್ಮ ಪ್ರತಿಭಟನೆಯ ದ್ಯೋತಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ಬಿಜೆಪಿ ಮುಖ್ಯಸ್ಥರ ದೂರಿನ ಮೇರೆಗೆ ಆಯಿಶಾ ಸುಲ್ತಾನ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಪಕ್ಷದ ಲಕ್ಷದ್ವೀಪ ಮುಖ್ಯಸ್ಥ ಸಿ. ಅಬ್ದುಲ್ ಖಾದರ್ ಹಾಜಿಗೆ 12 ನಾಯಕರು ಹಾಗೂ ಕಾರ್ಯಕರ್ತರ ಸಹಿ ಮಾಡಿದ ಪತ್ರದಲ್ಲಿ "ಪ್ರಸ್ತುತ ಆಡಳಿತಾಧಿಕಾರಿ ಪಟೇಲ್ ಅವರ ಕ್ರಮಗಳು ಜನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಜನರ ತೀವ್ರ ಯಾತನೆಗೆ ಕಾರಣವಾಗುತ್ತಿರುವ ಬಗ್ಗೆ ಲಕ್ಷದ್ವೀಪದಲ್ಲಿರುವ ಬಿಜೆಪಿಗೆ ಸಂಪೂರ್ಣವಾಗಿ ಅರಿವಿದೆ " ಎಂದು ಬರೆದಿದ್ದಾರೆ.
ಈ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ "ದೂರು ಸಲ್ಲಿಸುವ" ಬಗ್ಗೆ ನಾಯಕರು ಹಾಜಿಯವರನ್ನು ಒತ್ತಾಯಿಸಿದರು.
"ಲಕ್ಷದ್ವೀಪದ ಹಲವಾರು ಬಿಜೆಪಿ ನಾಯಕರು ಈಗಾಗಲೇ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಯ ವಿವಿಧ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆಂದು ನಿಮಗೆ ತಿಳಿದಿದೆ" ಎಂದು ಪತ್ರದಲ್ಲಿ ಹೇಳಲಾಗಿದೆ.
"ನೀವು ನಮ್ಮ ಸಹೋದರಿಯ ವಿರುದ್ಧ ಸುಳ್ಳು ಹಾಗೂ ನ್ಯಾಯಸಮ್ಮತವಲ್ಲದ ದೂರು ದಾಖಲಿಸಿದ್ದೀರಿ ಹಾಗೂ ಅವರ ಕುಟುಂಬ ಮತ್ತು ಅವರ ಭವಿಷ್ಯವನ್ನು ಹಾಳು ಮಾಡಿದ್ದೀರಿ. ನಾವು ನಮ್ಮ ಬಲವಾದ ಆಕ್ಷೇಪಣೆಯನ್ನು ತಿಳಿಸುತ್ತೇವೆ . ಬಿಜೆಪಿಯ ನಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತೇವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಪತ್ರಕ್ಕೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಮುಲ್ಲಿಪುಳ ಸಹಿತ ಇತರರು ಸಹಿ ಮಾಡಿದ್ದಾರೆ.