ಮೈಸೂರು: ಸಾ.ರಾ.ಕಲ್ಯಾಣ ಮಂಟಪ ಸುತ್ತ ಮುತ್ತ ಅಳತೆ ಮಾಡಿದ ಅಧಿಕಾರಿಗಳು

ಮೈಸೂರು: ನಗರದ ದಟ್ಟಗಳ್ಳಿಯಲ್ಲಿರುವ ಸಾ.ರಾ. ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂಬ ಆರೋಪದ ಬೆನ್ನಲ್ಲೇ ಅಧಿಕಾರಿಗಳು ಸಾ.ರಾ.ಕಲ್ಯಾಣ ಮಂಟಪದ ಸುತ್ತ ಮುತ್ತ ಅಳತೆ ಮಾಡಿದರು.
ಭೂ ಅಕ್ರಮದಲ್ಲಿ ಶಾಸಕ ಸಾ.ರಾ.ಮಹೇಶ್ ಭಾಗಿಯಾಗಿದ್ದಾರೆ. ನಗರದ ದಟ್ಟಗಳ್ಳಿಯಲ್ಲಿರುವ ಸಾ.ರಾ.ಮಹೇಶ್ ಒಡೆತನದ ಸಾ.ರಾ.ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ಇದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪ ಮಾಡಿದ್ದರು.
ನನ್ನ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ಇದ್ದರೆ ಅದನ್ನು ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿಕೊಟ್ಟು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ಜೂ.10ರಂದು ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಧರಣಿ ಕುಳಿತಿದ್ದರು.
ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಉಪವಿಭಾಗಧಿಕಾರಿ ವೆಂಕಟರಾಜು ನೇತೃತ್ವದಲ್ಲಿ ತಂಡ ರಚನೆ ಮಾಡಿ ಸೋಮವಾರದೊಳಗೆ ಅಳತೆ ಮಾಡಿ ವರದಿ ನೀಡುವಂತೆ ಆದೇಶಿಸಿದ್ದರು. ಹಾಗಾಗಿ ಉಪವಿಭಾಗಾಧಿಕಾರಿ ವೆಂಕಟರಾಜು, ಮೈಸೂರು ತಾಲ್ಲೂಕು ತಹಶೀಲ್ದಾರ್ ರಕ್ಷಿತ್, ಭೂ ಮಾಮಾಪಾನ ಇಲಾಖೆ ಉಪನಿರ್ದೇಶಕರು ಶನಿವಾರ ಸಾ.ರಾ.ಕಲ್ಯಾಣ ಮಂಟಪದ ಸುತ್ತಾ-ಮತ್ತ ಅಳತೆ ನಡೆಸುತ್ತಿದ್ದಾರೆ.





