ನಿಮ್ಮ ಜೇಬು ತುಂಬಿದರೆ ಸಾಕೆ ? ಬಡವರ ಸ್ಥಿತಿ ಏನಾಗಬೇಕು ?: ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಪ್ರಶ್ನೆ

ಹಿರಿಯೂರು: ಸರ್ಕಾರದ ಬೊಕ್ಕಸ ತುಂಬಿದರೆ ಸಾಕೇ..? ಬಡವರು, ಜನಸಾಮಾನ್ಯರು ಜೀವನ ನಡೆಸುವುದು ಹೇಗೆ? ಅವರ ಪರಿಸ್ಥಿತಿ ಏನಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇಂಧನ ತೈಲ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಐದು ದಿನಗಳ ಕಾಲ ರಾಜ್ಯಾದ್ಯಂತ ಹಮ್ಮಿಕೊಂಡಿರುವ '100 ನಾಟ್ ಔಟ್' ಆಂದೋಲನ ಭಾಗವಾಗಿ ಶಿವಕುಮಾರ್ ಅವರು ಚಿತ್ರದುರ್ಗದ ಹಿರಿಯೂರು ತಾಲೂಕು ಕೇಂದ್ರದಲ್ಲಿ ಶನಿವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದು ಹೀಗೆ:
'ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಮಾಡುತ್ತಿರುವ ಐದು ದಿನಗಳ ಪ್ರತಿಭಟನಾ ಆಂದೋಲನ ಭಾಗವಾಗಿ ಹಿರಿಯೂರು ತಾಲೂಕು ಕೇಂದ್ರಕ್ಕೆ ಇಂದು ಆಗಮಿಸಿದ್ದೇನೆ. ನಿನ್ನೆ ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮಾಡಿದ್ದು, ಇಂದು ತಾಲೂಕು ಕೇಂದ್ರಗಳಲ್ಲಿ, ನಾಳೆ ಹೋಬಳಿ ಹಾಗೂ ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ, ನಾಡಿದ್ದು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ, ಉಳಿದ ಕೇಂದ್ರಗಳಲ್ಲಿ 15ರಂದು ಪ್ರತಿಭಟನೆ ಮಾಡುತ್ತೇವೆ.
ಐದು ದಿನ ಐದು ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದು ಒಬ್ಬರ ಕಾರ್ಯಕ್ರಮ ಅಲ್ಲ. ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಇದು ಜನತಾದಳ, ಬಿಜೆಪಿ ಹಾಗೂ ಎಲ್ಲ ಜನರ ಕಾರ್ಯಕ್ರಮ ಎಂದು ಹೇಳಿದರು.
ಬಿಜೆಪಿಯವರೇ ಕಲಿಸಿದ ಪಾಠವಿದು
ಬಿಜೆಪಿಯವರು ಈ ಹಿಂದೆ ಇದೇ ಕೆಲಸ ಮಾಡಿದ್ದರಲ್ಲ.., ಅವರು ಪ್ರತಿಭಟನೆ ಮಾಡಿದ್ದನ್ನು ನಾವು ಈಗ ಮುಂದುವರಿಸುತ್ತಿದ್ದೇವೆ. ಅವರು ಪೆಟ್ರೋಲ್ ಬೆಲೆ 52 ರೂ. ತಲುಪಿದಾಗ ದೊಡ್ಡ ಹೋರಾಟ ಮಾಡಿದ್ದರು. ಈಗ 100 ರೂ. ಆಗಿದೆ. ಪೆಟ್ರೋಲ್ ಮೇಲೆ 62 ರೂ. ತೆರಿಗೆ ವಿಧಿಸಲಾಗಿದೆ. ಇದೊಂದೇ ವರ್ಷ ತಿಂಗಳಿಗೆ ಸರಾಸರಿ 18 ಬಾರಿಯಂತೆ ಬೆಲೆ ಹೆಚ್ಚಿಸಲಾಗಿದೆ. ಆ ಮೂಲಕ ಇಂಧನ ತೈಲ ಬೆಲೆಯಲ್ಲಿ ಶತಕ ಬಾರಿಸಿದೆ. ಇದಕ್ಕಾಗಿ ಹಲವೆಡೆ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಕೆಲವೆಡೆ ತಮಟೆ, ಜಾಗಟೆ ಹೊಡೆದು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರೇ ಇದನ್ನೆಲ್ಲ ನಮಗೆ ಹೇಳಿಕೊಟ್ಟರು.
ಪೆಟ್ರೋಲ್ ಡೀಸೆಲ್ ಬೆಲೆ ಇಷ್ಟು ಬಾರಿ ಹೆಚ್ಚಳ ಮಾಡಿದ್ದೀರಲ್ಲಾ.., ರೈತರ ಬೆಂಬಲ ಬೆಲೆ ಎಷ್ಟು ಬಾರಿ ಹೆಚ್ಚಿಸಿದ್ದೀರಿ? ರೈತನ ಎಲ್ಲ ಬೆಳೆಯ ಬೆಲೆಯನ್ನು ಎಷ್ಟು ಬಾರಿ ಹೆಚ್ಚಿಸಿದ್ದೀರಿ? ದಿನಗೂಲಿ, ಖಾಸಗಿ ಕಾರ್ಮಿಕರು, ನೌಕರರು, ನರೇಗಾ ಕಾರ್ಮಿಕರ ವೇತನ ಎಷ್ಟು ಬಾರೀ ಹೆಚ್ಚಿಸಿದ್ದೀರಿ ? ಎಂದು ಯಡಿಯೂರಪ್ಪ ಹಾಗೂ ಮೋದಿ ಅವರನ್ನು ಕೇಳಲು ಬಯಸುತ್ತೇನೆ.
ಹೆಣ ಸುಡಲು ಕ್ಯೂ..
ರಾಜ್ಯದಲ್ಲಿ ಹೆಣ ಸುಡಲು ಕ್ಯೂ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಯ್ತಲ್ಲ, ಬೆಡ್ ಪಡೆಯಲು, ಆಂಬುಲೆನ್ಸ್ ಸೇವೆಗೆ, ಔಷಧಿ, ಲಸಿಕೆಗೂ ಕ್ಯೂ ಆಯ್ತಲ್ಲ.. ಅವರ ಆಡಳಿತಕ್ಕೆ ಇದಕ್ಕಿಂಥ ಬೇರೆ ಸಾಕ್ಷಿ ಬೇಕೇ? ಔಷಧಿ, ಹಾಸಿಗೆ, ಲಸಿಕೆ ಎಲ್ಲದರಲ್ಲೂ ಹಣ ಮಾಡುತ್ತಿದ್ದಾರೆ. ಅವರೇ ಕಾಯಿಲೆ ತಂದವರು. ಈಗ ಏನು ಮಾಡಿದ್ದಾರೆ ? ಜನ ಈ ಸರ್ಕಾರಕ್ಕೆ ಉಗಿಯುತ್ತಿದ್ದಾರೆ. ಸರ್ಕಾರದ ನಾಯಕತ್ವ ಬದಲಾವಣೆ ವಿಚಾರವಾಗಿ ಯಾವ ಸಿನಿಮಾ ತೋರಿಸುತ್ತಾರೋ ನಾವು ನೋಡುತ್ತೇವೆ.' ಎಂದು ಡಿಕೆ ಶಿವಕುಮಾರ್ ಹೇಳಿದರು.







