ಮಂಗಳೂರು: ನವಭಾರತ್ ಸರ್ಕಲ್‌ನಲ್ಲಿ ಪುರಾತನ ಬಾವಿ ಪತ್ತೆ !

ಮಂಗಳೂರು, ಜೂ. 12: ನಗರದ ರಾಷ್ಟ್ರಕವಿ ಗೋವಿಂದ ಪೈ ವೃತ್ತದಲ್ಲಿ (ನವಭಾರತ್ ವೃತ್ತ) ಶನಿವಾರ ಪುರಾತನ ಬಾವಿ ಪತ್ತೆಯಾಗಿದ್ದು, ಸುಮಾರು 100 ವರ್ಷಗಳಿಗೂ ಹಿಂದಿನ ಬಾವಿ ಇದೆಂದು ಹೇಳಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ವೃತ್ತದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಹಳೆ ವೃತ್ತವನ್ನು ತೆರವುಗೊಳಿಸಿ ಶುಚಿಗೊಳಿಸುವ ಕೆಲಸ ನಡೆಯುತ್ತಿದೆ. ಈ ಸಂದರ್ಭ ವೃತ್ತದ ತಳಪಾಯದಲ್ಲಿ ಅಗಲವಾದ ಕಾಂಕ್ರಿಟ್ ಸ್ಲ್ಯಾಬ್ ಇರುವುದು ಪತ್ತೆಯಾಗಿದೆ. ಕುತೂಹಲದಿಂದ ಕಾಂಕ್ರಿಟ್ ಒಡೆದು ನೋಡಿದಾಗ ಒಳಗಡೆ ಸುಮಾರು 40 ಅಡಿ ಆಳದ ಬಾವಿ ಪತ್ತೆಯಾಗಿದೆ.
ಇತ್ತೀಚೆಗೆ ಹಂಪನಕಟ್ಟೆ ಬಳಿ ಪತ್ತೆಯಾಗಿದ್ದ ಬಾವಿಯ ಅವಧಿಯಲ್ಲೇ ಈ ಬಾವಿಯೂ ನಿರ್ಮಾಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಬಾವಿಯಲ್ಲಿ ಸುಮಾರು 20 ಅಡಿ ಆಳದಲ್ಲಿ ನೀರು ಕಂಡು ಬರುತ್ತಿದ್ದು, ಬಾವಿಯ ನಿಖರವಾದ ಆಳವನ್ನು ಅಂದಾಜಿಸಲಾಗಿಲ್ಲ.
ಸುಮಾರು 35 ವರ್ಷಗಳ ಹಿಂದೆ ನವಭಾರತ್ ವೃತ್ತವನ್ನು ಅಭಿವೃದ್ಧಿಪಡಿಸಲಾಗಿತ್ತು. ಆ ಬಳಿಕ ವೃತ್ತದ ಮೇಲ್ಭಾಗವನ್ನಷ್ಟೇ ಸುಂದರೀಕರಣಗೊಳಿಸಲಾಗಿತ್ತು. ಹಿಂದೆ ವೃತ್ತವನ್ನು ಅಭಿವೃದ್ಧಿಪಡಿಸಿದ ಸಂದರ್ಭ ಕಾಂಕ್ರಿಟ್ ಸ್ಲ್ಯಾಬ್ ಅಳವಡಿಸಿರುವ ಸಾಧ್ಯತೆ ಇದೆ. ಆದರೆ ಈ ಬಾವಿ ಎಷ್ಟು ಹಳೆಯದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಬಾವಿಯ ಅಸ್ತಿತ್ವವನ್ನು ಉಳಿಸಲು ಪ್ರಯತ್ನಿಸಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.
ಸದ್ಯ ವೃತ್ತದ ಅಭಿವೃದ್ಧಿಗೆ ಪ್ಲ್ಯಾನ್ ಸಿದ್ಧವಾಗಿದ್ದು, ಅದರಂತೆ ಕಾಮಗಾರಿ ಆರಂಭವಾಗಿದೆ. ಮುಂದೆ ಈ ವೃತ್ತವನ್ನು ಮಂಗಳೂರಿನ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್‌ನವರು ನಿರ್ವಹಣೆ ಮಾಡುವ ಬಗ್ಗೆ ಈಗಾಗಲೇ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಿಂದೆಲ್ಲಾ ಹ್ಯಾಂಡ್‌ಮೇಡ್ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದ ಕಾರಣ ಬಾಳ್ವಿಕೆ ಹೆಚ್ಚಾಗಿದ್ದು, ಕಾಂಕ್ರಿಟೀಕರಣದ ಸಂದರ್ಭ ಹುದುಗಿರುವ ಈ ಬಾವಿಗಳು ಅತ್ಯಂತ ಸುರಕ್ಷಿತವಾಗಿರುವುದು ಕಂಡು ಬರುತ್ತಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಅಭಿಪ್ರಾಯಿಸಿದ್ದಾರೆ.
ರಾಷ್ಟ್ರಕವಿ ಗೋವಿಂದ ಪೈ ವೃತ್ತ ಅಭಿವೃದ್ಧಿಯಾಗುವ ಸಂದರ್ಭ ಸ್ವಲ್ಪ ನಕಾಶೆ ಬದಲಾಯಿಸಲಾಗಿದ್ದು, ಈಗಿರುವ ವಿಸ್ತೀರ್ಣಕ್ಕಿಂತ ಅಗಲವಾಗಿ ಬರಲಿದೆ. ವೃತ್ತಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ರಸ್ತೆಗಳು ಅಭಿವೃದ್ಧಿಯಾಗುವ ಹಿನ್ನೆಲೆಯಲ್ಲಿ ವೃತ್ತವನ್ನೂ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಹಿಂದೆ ಹಂಪನಕಟ್ಟೆಯಲ್ಲಿಯೂ ಪುರಾತನ ಬಾವಿ ಪತ್ತೆಯಾಗಿದ್ದು, ಅದನ್ನು ಸಂರಕ್ಷಿಸಿ ಮೇಲ್ಭಾಗದಲ್ಲಿ ಕಟ್ಟೆಯನ್ನು ನಿರ್ಮಿಸಿ ಹಳೆ ಐತಿಹ್ಯವನ್ನು ಉಳಿಸುವ ಪ್ರಯತ್ನವಾಗಿದೆ. ಬಾವಿ ಪತ್ತೆಯ ಮಾಹಿತಿಯನ್ನು ತಿಳಿದು ಬಹಳಷ್ಟು ಮಂದಿ ಕುತೂಹಲಿಗಳು ಸ್ಥಳಕ್ಕೆ ಆಗಮಿಸಿ ಫೋಟೋ, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.









