ದಿಲ್ಲಿಗೆ ಖಾಸಗಿ ಜೆಟ್ ನಲ್ಲಿ ಕರೆಸಿ ಬಿಜೆಪಿಗೆ ಸೇರಿಸಿದ್ದ ರಾಜೀಬ್ ಬ್ಯಾನರ್ಜಿಯಿಂದ ಟಿಎಂಸಿ ನಾಯಕರ ಭೇಟಿ

photo: The New Indian Express
ಕೋಲ್ಕತಾ: ಬಿಜೆಪಿ ಮುಖಂಡ ರಾಜೀಬ್ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ಮುಖಂಡ ಕುನಾಲ್ ಘೋಷ್ ಅವರನ್ನು ಶನಿವಾರ ಕೋಲ್ಕತ್ತಾದ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಕುನಾಲ್ ಘೋಷ್ ಟಿಎಂಸಿಯ ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಈ ಹಿಂದೆ ಟಿಎಂಸಿಯಲ್ಲಿದ್ದ ರಾಜೀಬ್ ಬ್ಯಾನರ್ಜಿಯವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಸಲುವಾಗಿ ಪ್ರೈವೇಟ್ ಜೆಟ್ ನಲ್ಲಿ ಬಿಜೆಪಿಯು ದಿಲ್ಲಿಗೆ ಕರೆಸಿತ್ತು ಎಂದು ತಿಳಿದು ಬಂದಿದೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುಕುಲ್ ರಾಯ್ ಟಿಎಂಸಿ ಸೇರಿದ ಬಳಿಕ ಈ ಭೇಟಿಯು ರಾಜಕೀಯ ವಲಯದಲ್ಲಿ ಕುತೂಹಲಕಕೆ ಕಾರಣವಾಗಿದೆ. " ಸೌಜನ್ಯ ಭೇಟಿಗಾಗಿ ನಾನು ಇಲ್ಲಿ ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಇಲ್ಲಿಯವರೆಗೆ ನಾನು ಬಿಜೆಪಿಯಲ್ಲಿದ್ದೇನೆ" ಎಂದು ರಾಜೀಬ್ ಬ್ಯಾನರ್ಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. "ಇದು ಸೌಜನ್ಯ ಭೇಟಿಯಾಗಿತ್ತು " ಎಂದು ಕುನಾಲ್ ಘೋಷ್ ಕೂಡ ಉಲ್ಲೇಖಿಸಿದ್ದಾರೆ.
ಪಶ್ಚಿಮ ಬಂಗಾಳದ ಮಾಜಿ ಸಚಿವರಾಗಿದ್ದ ಬ್ಯಾನರ್ಜಿ ಅವರು ಟಿಎಂಸಿಯನ್ನು ತೊರೆದು ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಈ ವರ್ಷದ ಜನವರಿಯಲ್ಲಿ ಬಿಜೆಪಿಗೆ ಸೇರಿದ್ದ ಐವರು ಟಿಎಂಸಿ ನಾಯಕರಲ್ಲಿ ರಾಜೀಬ್ ಬ್ಯಾನರ್ಜಿ ಕೂಡ ಇದ್ದರು.
ಈ ತಿಂಗಳ ಆರಂಭದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಪಕ್ಷದ ಪ್ರಮುಖ ಸಭೆಯಿಂದ ರಾಜೀಬ್ ಬ್ಯಾನರ್ಜಿ ದೂರ ಉಳಿಯುವ ಮೂಲಕ ಸುದ್ದಿಯಾಗಿದ್ದರು. ಶಮಿಕ್ ಭಟ್ಟಾಚಾರ್ಯ ಹಾಗೂ ಮುಕುಲ್ ರಾಯ್ ಕೂಡ ಸಭೆಯಲ್ಲಿ ಭಾಗವಹಿಸಿರಲಿಲ್ಲ.







