ದ.ಕ.ಜಿಲ್ಲೆ; ಬ್ಲ್ಯಾಕ್ ಫಂಗಸ್ 2 ಪ್ರಕರಣ ಪತ್ತೆ: ಇಬ್ಬರು ಬಲಿ

ಮಂಗಳೂರು, ಜೂ.12: ದ.ಕ. ಜಿಲ್ಲೆಯಲ್ಲಿ ಶನಿವಾರ ಹೊಸತಾಗಿ 2 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಇಬ್ಬರು ಬಲಿಯಾಗಿದ್ದಾರೆ. ಪತ್ತೆಯಾದ ಎರಡು ಹೊಸ ಪ್ರಕರಣವು ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ್ದಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಅದಲ್ಲದೆ ಶನಿವಾರ ಬ್ಲ್ಯಾಕ್ ಫಂಗಸ್ ಗೆ ಇಬ್ಬರು ಬಲಿಯಾಗಿದ್ದಾರೆ. ಆ ಪೈಕಿ ಒಬ್ಬರು ಚಿಕ್ಕಮಗಳೂರಿನವರು ಮತ್ತು ಇನ್ನೊಬ್ಬರು ಹಾಸನ ಜಿಲ್ಲೆಗೆ ಸೇರಿದವರಾಗಿದ್ದಾರೆ. ಇದರೊಂದಿಗೆ ದ.ಕ.ಜಿಲ್ಲೆಯ ಇಬ್ಬರು ಮತ್ತು ಹೊರ ಜಿಲ್ಲೆಯ 12 ಮಂದಿಯ ಸಹಿತ ಬ್ಲ್ಯಾಕ್ ಫಂಗಸ್‌ಗೆ ದ.ಕ.ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ.
ದ.ಕ.ಜಿಲ್ಲೆಯಲ್ಲಿ ಸದ್ಯ 45 ಬ್ಲ್ಯಾಕ್ ಫಂಗಸ್ ಸಕ್ರಿಯ ಪ್ರಕರಣಗಳು ಇವೆ. ಇದರಲ್ಲಿ 9 ದ.ಕ. ಜಿಲ್ಲೆಗೆ ಮತ್ತು 36 ಪ್ರಕರಣಗಳು ಹೊರಜಿಲ್ಲೆಗೆ ಸಂಬಂಧಿಸಿದ್ದಾಗಿದೆ. ಅದರಲ್ಲಿ ವೆನ್ಲಾಕ್‌ನಲ್ಲಿ 34 ಮತ್ತು ಖಾಸಗಿ ಆಸ್ಪತ್ರೆಯಲ್ಲಿ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ 9 ಮಂದಿ ಗುಣಮುಖರಾಗಿದ್ದು, ಇದರೊಂದಿಗೆ ಈವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದವರ ಸಂಖ್ಯೆ 13ಕ್ಕೇರಿದೆ. ಅದರಲ್ಲಿ ದ.ಕ.ಜಿಲ್ಲೆಯ ಇಬ್ಬರು ಮತ್ತು ಹೊರ ಜಿಲ್ಲೆಯ 11 ಮಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







