ಉಡುಪಿ ಜಿಲ್ಲೆಯಲ್ಲಿ 258 ಮಂದಿಗೆ ಕೊರೋನ ಸೋಂಕು, ಇಬ್ಬರು ಬಲಿ

ಉಡುಪಿ, ಜೂ.12: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 258ಕ್ಕೇರಿದೆ. ದಿನದಲ್ಲಿ ಇಬ್ಬರು ಮೃತಪಟ್ಟರೆ, 625 ಮಂದಿ ಚಿಕಿತ್ಸೆಯಿಂದ ಗುಣಮುಖ ರಾಗಿದ್ದಾರೆ. ಸದ್ಯ 3348 ಮಂದಿ ಸಕ್ರಿಯ ಸೋಂಕಿತರು ಜಿಲ್ಲೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಶನಿವಾರ ಕುಂದಾಪುರ ತಾಲೂಕಿನ 43ರ ಹರೆಯದ ಮಹಿಳೆ ಹಾಗೂ ಉಡುಪಿಯ 68ರ ಹರೆಯದ ವೃದ್ಧೆ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 356ಕ್ಕೇರಿದೆ. 43ವರ್ಷದ ಮಹಿಳೆ ಮೇ 29ರಂದು ಕೋವಿಡ್ ಗುಣಲಕ್ಷಣದೊಂದಿಗೆ ಉಸಿರಾಟ ತೊಂದರೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಉಡುಪಿಯ ವೃದ್ಧೆ ಜೂ.7ರಂದು ನ್ಯುಮೋನಿಯಾ ಜ್ವರಕ್ಕಾಗಿ ಆಸ್ಪತ್ರೆಗೆ ಸೇರಿದ್ದು ನಿನ್ನೆ ಮೃತಪಟ್ಟರು.
ಶುಕ್ರವಾರ ಪಾಸಿಟಿವ್ ಬಂದ 258 ಮಂದಿಯಲ್ಲಿ 136 ಮಂದಿ ಪುರುಷರು ಹಾಗೂ 122 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 133, ಕುಂದಾಪುರ ತಾಲೂಕಿನ 75 ಹಾಗೂ ಕಾರ್ಕಳ ತಾಲೂಕಿನ 47 ಮಂದಿ ಇದ್ದು, ಮೂವರು ಹೊರಜಿಲ್ಲೆಯಿಂದ ಚಿಕಿತ್ಸೆಗೆಂದು ಬಂದವರು. ಇವರಲ್ಲಿ 13 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 245 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ನಿನ್ನೆ ಒಟ್ಟು 625 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 60,350ಕ್ಕೇರಿದೆ. ಶುಕ್ರವಾರ ಜಿಲ್ಲೆಯ 3404 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 64,054 ಆಗಿದೆ ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,33,103 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಮತ್ತಿಬ್ಬರಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆ
ಜಿಲ್ಲೆಯಲ್ಲಿ ಇಂದು ದಾವಣಗೆರೆಯ 55ರ ಹರೆಯದ ವ್ಯಕ್ತಿ ಕಪ್ಪು ಶಿಲೀಂದ್ರ ಸೋಂಕಿನ ಚಿಕಿತ್ಸೆಗಾಗಿ ಇಂದು ಮಣಿಪಾಲ ಕೆಎಂಸಿಗೆ ದಾಖಲಾಗಿದ್ದಾರೆ. ಈ ಮೂಲಕ ಕೆಎಂಸಿಯಲ್ಲಿ ಹೊರಜಿಲ್ಲೆಯ ಮೂವರು ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.
ನಿನ್ನೆ ಶಂಕಿತ ಸೋಂಕಿನ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಇಬ್ಬರಲ್ಲಿ ಕುಂದಾಪುರದ ಒಬ್ಬರು ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಅವರೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿ ಮೂವರು ಈಗ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ. ಇಂದು ಗುಣಮುಖರಾದ ಇಬ್ಬರು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
5555 ಮಂದಿಗೆ ಲಸಿಕೆ
ಜಿಲ್ಲೆಯಲ್ಲಿ ಶನಿವಾರ ಒಟ್ಟು 5555 ಮಂದಿ ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಇವರಲ್ಲಿ 5190 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರೆ, 365 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು 18ರಿಂದ 44 ವರ್ಷದೊಳಗಿನ 3990 ಮಂದಿ ಮೊದಲ ಡೋಸ್‌ನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 1184 ಮಂದಿ ಮೊದಲ ಡೋಸ್ ಹಾಗೂ 355 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. 24 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ ಇಬ್ಬರು ಮುಂಚೂಣಿ ಕಾರ್ಯಕರ್ತರು ಸಹ ಇಂದು ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 3,05,389 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದರೆ, 89,945 ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.







